ಕೋವಿಡ್-19 ನಿಯಮ ಮಧ್ಯೆ ಬೆಳಗಾವಿಯಲ್ಲಿ ಬಿಜೆಪಿ ಮೆಗಾ ರ್ಯಾಲಿ: ಸುಮಾರು 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ!

ಬೆಳಗಾವಿ: ಕೋವಿಡ್-19 ಸಾಂಕ್ರಾಮಿಕದ ನಿಯಮಗಳು ಇನ್ನೂ ದೇಶಾದ್ಯಂತ ಜಾರಿಯಲ್ಲಿದ್ದರೂ ಕೂಡ ಕರ್ನಾಟಕದಲ್ಲಿ ಬಿಜೆಪಿ ನಾಯಕರು ಬೃಹತ್ ರ್ಯಾಲಿಯನ್ನು ಆಯೋಜಿಸಲು ಮುಂದಾಗಿದ್ದಾರೆ. ಬೆಳಗಾವಿಯ ಜಿಲ್ಲಾ ಸ್ಟೇಡಿಯಂನಲ್ಲಿ ಇದೇ 17ರಂದು ಸುಮಾರು 3 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಬಿಜೆಪಿಯ ಜನ ಸೇವಾ ಸಮಾವೇಶ ನಡೆಯಲಿದ್ದು ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಉಸ್ತುವಾರಿಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸುಮಾರು 85 ಸಾವಿರ ವಾಹನ ಬರಲಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಿದ್ದು, ಎಲ್ಲರ ಸಹಕಾರವಿದೆ ಎಂದರು.

ದೇಶದ ಮೂಲೆಮೂಲೆಗಳಿಂದ ಹಲವು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ವಾಹನಗಳನ್ನು ಕಾರ್ಯಕ್ರಮದ ಹೊರಗೆ ಹೇಗೆ ನಿಲ್ಲಿಸುವುದು, ಪೊಲೀಸರು ಇಷ್ಟೊಂದು ಜನರನ್ನು ಹೇಗೆ ನಿಭಾಯಿಸುತ್ತಾರೆ ಎಂದು ಸ್ಥಳೀಯ ನಾಯಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್-19 ನಿಯಮ ಇನ್ನೂ ಜಾರಿಯಲ್ಲಿರುವಾಗ ಇಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ಆಡಳಿತಾರೂಢ ಸರ್ಕಾರ ಹೇಗೆ ನಡೆಸುತ್ತದೆ ಎಂಬುದು ಪ್ರಶ್ನೆಯಾಗಿದೆ.

ಈ ಬಗ್ಗೆ ಮಾತನಾಡಿದ ಖ್ಯಾತ ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗದದ, ಇನ್ನೂ ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ತೊಲಗಿಲ್ಲ, ಹೀಗಿರುವ ಸಂದರ್ಭದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು ಎಷ್ಟು ಸರಿ, ಇನ್ನೊಂದೆಡೆ ಸರ್ಕಾರ ಸಾಮಾನ್ಯ ಜನರು ಹೊರಗೆ ಅಡ್ಡಾಡುವಾಗ ಮಾಸ್ಕ್ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ಹಾಕಿ ಲಕ್ಷಾಂತರ ರೂಪಾಯಿ ಸಂಗ್ರಹಿಸುತ್ತದೆ, ಸಾಮಾನ್ಯ ಜನತೆಗೆ ಒಂದು ನ್ಯಾಯ, ಗಣ್ಯ ವ್ಯಕ್ತಿಗಳಿಗೆ ಮತ್ತೊಂದು ನ್ಯಾಯವೇ ಎಂದು ಕೇಳುತ್ತಾರೆ.

ಸರ್ಕಾರ ಕೋವಿಡ್-19 ನಿಯಮ ಉಲ್ಲಂಘಿಸಿದ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳ ಮೇಲೆ ದಂಡ ಹಾಕಿದ ಯಾವುದೇ ಪ್ರಸಂಗಗಳಿಲ್ಲ ಎನ್ನುವ ಭೀಮಪ್ಪ ಗದದ್ ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಸರ್ಕಾರ ತಮ್ಮ ಪತ್ರಕ್ಕೆ ಪ್ರತಿಕ್ರಿಯಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *