ಟ್ವಿಟರ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಆಯ್ತು ಈಗ ಟ್ರಂಪ್ ಯೂಟ್ಯೂಬ್ ಚಾನಲ್ ಕೂಡಾ ಬ್ಲಾಕ್…!
ಅಮೇರಿಕಾದ ಅಧಿಕಾರ ಕೇಂದ್ರ ಸ್ಥಾನವೂ ಆದ ಯೂ.ಎಸ್. ಕ್ಯಾಪಿಟಲ್ನಲ್ಲಿ ನಡೆದ ದಾಂಧಲೆ ಹಾಗೂ ಹಿಂಸಾಚಾರದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ಟ್ರಂಪ್ ಅವರ ಖಾತೆಗಳನ್ನು ಅಮಾನತುಗೊಳಿಸಿದೆ. ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಚ್, ರೆಡಿಟ್ ಮುಂತಾದ ಸಾಮಾಜಿಕ ಜಾಲತಾಣಗಳಿಂದ ಬಹಿಷ್ಕಾರಕ್ಕೆ ಒಳಗಾಗಿರುವ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಗೂಗಲ್ ಒಡೆತನದ ಯೂಟ್ಯೂಬ್ ಕೂಡ ಡೊನಾಲ್ಡ್ ಟ್ರಂಪ್ ಅವರ ಚಾನೆಲ್ ಅನ್ನು ಬ್ಲಾಕ್ ಮಾಡಿದೆ.
ಕಂಪೆನಿಯ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರಂಪ್ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋವನ್ನು ತೆಗೆದು ಹಾಕಿರುವ ಯೂಟ್ಯೂಬ್, ಟ್ರಂಪ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಟ್ರಂಪ್ ಮೇಲಿನ ಈ ನಿರ್ಬಂಧ ಕನಿಷ್ಠ ಏಳು ದಿನಗಳವರೆಗೆ ಇರಲಿದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮತ್ತಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡಿದರೆ ನಿರ್ಬಂಧ ಮುಂದುವರಿಯಲಿದೆ. ಹಾಗೆಯೇ ಚಾನೆಲ್‌ನ ಕಮೆಂಟ್ ವಿಭಾಗವನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಯೂಟ್ಯೂಬ್ ತಿಳಿಸಿದೆ.