ಹಗುರವಾಗಿ ಮಾತನಾಡಬೇಡಿ, ಅತೃಪ್ತ ಶಾಸಕರಿಗೆ ಬಿಎಸ್ವೈ ವಾರ್ನಿಂಗ್
ಬೆಂಗಳೂರು: ಸಂಪುಟ ವಿಸ್ತರಣೆಯ ಬೆನ್ನಲ್ಲೇ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವ ಬಿಜೆಪಿ ಅತೃಪ್ತ ಶಾಸಕರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಾರ್ನಿಂಗ್ ನೀಡಿದ್ದಾರೆ. ಬಹಿರಂಗವಾಗಿ ಹಗುರವಾಗಿ ಮಾತನಾಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕರು ಹಗುರವಾಗಿ ಮಾತನಾಡುವುದು ಬೇಡ, ಅತೃಪ್ತಿ ಇದ್ದವರು ವರಿಷ್ಠರ ಬಳಿ ತೆರಳಿ ದೂರು ನೀಡಿ. ಇದಕ್ಕೆ ನನ್ನ ಅಭ್ಯಂತರ ಇಲ್ಲ. ಯಾವುದು ಸರಿ ಯಾವುದು ತಪ್ಪು ಎಂದು ದೆಹಲಿ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು. ದೆಹಲಿ ನಾಯಕರಿಗೆ ಎಲ್ಲವೂ ಗೊತ್ತಿದೆ ಎಂದ ಬಿಎಸ್ವೈ ಮುನಿರತ್ನ ಅವರನ್ನು ಮಂತ್ರಿ ಮಾಡದ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಹಲವು ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಯತ್ನಾಳ್ ಸಿಎಂ ಬಿಎಸ್ವೈ ವಿರುದ್ಧ ಗಂಭೀರ ಆರೋಪ ಮಾಡಿದ್ದು ಸಿ.ಡಿ ಹಾಗೂ ಹಣ ಕೊಟ್ಟು ಸಚಿವ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ಎಂಪಿ ರೇಣುಕಾಚಾರ್ಯ, ಸಿದ್ದು ಸವದಿ, ಅರವಿಂದ್ ಬೆಲ್ಲದ್, ತಿಪ್ಪಾರೆಡ್ಡಿ, ಸತೀಶ್ ರೆಡ್ಡಿ, ನೆಹರೂ ಓಲೆಕಾರ್, ಜಿ. ಸೋಮಶೇಖರ್ ರೆಡ್ಡಿ ಸೇರಿದಂತೆ ಹಲವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರಿಗೆ ಬಿಎಸ್ವೈ ಎಚ್ಚರಿಕೆ ನೀಡಿದ್ದಾರೆ.