ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಹೂವು, ಹಣ್ಣಿನ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ!
ದೊಡ್ಡಬಳ್ಳಾಪುರ: ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬದ ಖರೀದಿ ಸಂಭ್ರಮ ಕಂಡು ಬಂದಿದೆ. ತಾಲೂಕಿನಲ್ಲಿಈ ಬಾರಿ ವಾಡಿಕೆ ಮಳೆ ಆಗಿದೆ. ಆದರೆ ಅಗತ್ಯ ಧಾನ್ಯಗಳು, ಹೂ ಹಣ್ಣುಗಳ ಬೆಲೆ ಗಗನಕ್ಕೇರಿರುವ ನಡುವೆ ಸಂಕ್ರಾಂತಿ ಹಬ್ಬ ನಡೆಯುತ್ತಿದೆ.
ಕಡಲೆಕಾಯಿ ಕೆಜಿಗೆ 80 ರೂ., ಎಳ್ಳು ಬೆಲ್ಲ ಕೆಜಿಗೆ 160 ರೂ., ಗೆಣಸು 35 ರೂ., ಕಬ್ಬು ಒಂದು ಜೊಲ್ಲೆಗೆ 50 ರೂ., ಅವರೆಕಾಯಿ 60 ರೂ. ಇದ್ದು ಬೆಲೆಗಳು ಏರಿಕೆ ಕಂಡಿವೆ.
ಬೆಲೆ ಏರಿಕೆಯ ನಡುವೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಕಬ್ಬು, ಗೆಣಸು, ಕಡಲೆಕಾಯಿ ಮಾರಾಟ ಭರದಿಂದ ಸಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಅಗತ್ಯವೆನಿಸಿದ ಅಕ್ಕಿ, ಬೇಳೆ, ಧಾನ್ಯಗಳ ಬೆಲೆಯೊಂದಿಗೆ ಹೂವು ಹಣ್ಣಿನ ಬೆಲೆಗಳು ಗಗನಕ್ಕೇರಿವೆ.
ಕಾಕಡ ಕೆ.ಜಿಗೆ 500 ರೂ., ಕನಕಾಂಬರ ಕೆಜಿಗೆ 1,000 ರೂ. ಇದ್ದರೆ ಸೇವಂತಿಗೆ, ಗುಲಾಬಿ ಮೊದಲಾದ ಹೂವಿನ ಬೆಲೆಗಳು 200 ರೂ. ವರೆಗೆ ಏರಿಕೆ ಕಂಡಿದೆ. ತರಕಾರಿ ಬೆಲೆ ಸಾಧಾರಣವಾಗಿದೆ. ತಾಲೂಕಿಗೆ ಕಬ್ಬು ತಮಿಳುನಾಡಿನಿಂದ, ನೆಲಗಡಲೆ ಆಂಧ್ರ ಪ್ರದೇಶದಿಂದ ತಂದು ಮಾರಾಟ ಮಾಡಲಾಗುತ್ತಿದೆ.