ಬಿಜೆಪಿಯ ಅಸಮಾಧಾನಿತರು ಬಹಿರಂಗವಾಗಿ ಮಾತಾಡದೆ ಹೈಕಮಾಂಡ್​ಗೆ ದೂರು ನೀಡಿ; ಸಿಎಂ ಯಡಿಯೂರಪ್ಪ

ಬೆಂಗಳೂರು (ಜ. 14): ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟಕ್ಕೆ ನಿನ್ನೆಯಷ್ಟೇ 7 ಸಚಿವರು ಸೇರ್ಪಡೆಯಾಗಿದ್ದಾರೆ. ಆದರೆ, ಇದಾದ ಬಳಿಕ ಬಿಜೆಪಿಯಲ್ಲಿ ಅಸಮಾಧಾನಿರ ಸಂಖ್ಯೆ ಹೆಚ್ಚಾಗಿದೆ. ಹೆಚ್. ವಿರ್ಶವನಾಥ್, ಮುನಿರತ್ನ, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ರಾಮದಾಸ್ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿಯೇ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟ್ವೀಟ್​ ಮೂಲಕ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಪುಟ ವಿಸ್ತರಣೆಯ ಬಗ್ಗೆ ಬಿಜೆಪಿಯ ಯಾವುದೇ ಶಾಸಕರಿಗೆ ಏನೇ ವಿರೋಧವಿದ್ದರೂ ದೆಹಲಿಯ ನಾಯಕರಿಗೆ ದೂರು ನೀಡಲಿ. ಹೀಗೆ ಸುಮ್ಮನೆ ಬಹಿರಂಗವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ತರಬೇಡಿ ಎಂದು ಸೂಚಿಸಿದ್ದಾರೆ.

ಸಂಪುಟ ವಿಸ್ತರಣೆಯಿಂದ ಅಸಮಾಧಾನ ಇರುವ ಶಾಸಕರು ಹಗುರವಾಗಿ ಮಾತಾಡೋದು ಬೇಡ. ಅಸಮಾಧಾನ ಇದ್ದವರು ದೆಹಲಿಗೆ ಹೋಗಿ ವರಿಷ್ಠರ ಜತೆ ಮಾತಾಡಲಿ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಹೊಸದಾಗಿ ನೇಮಕಗೊಂಡ ಸಚಿವರ ಆಯ್ಕೆಯ ಬಗ್ಗೆ ಅಸಮಾಧಾನವಿದ್ದರೆ ಹೈಕಮಾಂಡ್ ನಾಯಕರಿಗೆ ದೂರು ನೀಡಲಿ. ಅದು ಬಿಟ್ಟು ಬಹಿರಂಗವಾಗಿ ಮಾತನಾಡಿ ನಮ್ಮ ಪಕ್ಷಕ್ಕೆ ಮುಜುಗರ ತರಬಾರದು. ಶಾಸಕರು ಏನೇ ಮಾಹಿತಿ ಇದ್ದರೂ ದೆಹಲಿಗೆ ಹೋಗಿ ದೂರು ಕೊಡಲಿ. ಶಾಸಕರು ದೆಹಲಿಗೆ ಹೋಗಲು ನಮ್ಮ ಅಭ್ಯಂತರ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಶಾಸಕರು ನನ್ನ ವಿರುದ್ಧ ದೂರು ನೀಡಿದರೆ ವರಿಷ್ಠರು ಸರಿ ಯಾವುದು, ತಪ್ಪು ಯಾವುದು ಎಂದು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿರುವ ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ದೆಹಲಿ ವರಿಷ್ಠರ ನಿರ್ಧಾರ. ಅದರ ಬಗ್ಗೆ ಅತೃಪ್ತಿ ಇದ್ರೆ ವರಿಷ್ಠರ ಬಳಿಗೇ ಹೋಗಿ ಎಂದು ಬಿಜೆಪಿಯ ಅಸಮಾಧಾನಿತರಿಗೆ ನೇರ ಸೂಚನೆ ನೀಡಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆ ವಿಚಾರದಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.

ನಿನ್ನೆ ಅಬಕಾರಿ ಸಚಿವ ಹೆಚ್ ನಾಗೇಶ್​ ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದ ಸಿಎಂ ಯಡಿಯೂರಪ್ಪ ಎಂಟಿಬಿ ನಾಗರಾಜ್, ಆರ್ ಶಂಕರ್, ಅರವಿಂದ್ ಲಿಂಬಾವಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್ ಅಂಗಾರ ಮತ್ತು ಸಿ.ಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದ ಮುನಿರತ್ನ ಹಾಗೂ ಜೆಡಿಎಸ್​ನಿಂದ ವಲಸೆ ಬಂದಿದ್ದ ಹೆಚ್. ವಿಶ್ವನಾಥ್ ಸಚಿವ ಸ್ಥಾನ ಪಡೆಯಲು ಕೊನೆಯ ಕ್ಷಣದವರೆಗೂ ನಡೆಸಿದ ಕಸರತ್ತು ವ್ಯರ್ಥವಾಯಿತು.

ಇದರ ಜೊತೆಗೆ ಸಿ.ಪಿ. ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬಿಜೆಪಿಯಲ್ಲಿಯೇ ಅನೇಕರು ಅಸಮಾಧಾನ ಹೊರಹಾಕಿದ್ದರು. ಸಿ.ಪಿ. ಯೋಗೇಶ್ವರ್ ಯಡಿಯೂರಪ್ಪನವರಿಗೆ ಬ್ಲಾಕ್​ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆಂದು ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *