Makara Sankranti: ಮಕರ ಸಂಕ್ರಾಂತಿ; ಇಂದು ಸಂಜೆ ಗವಿ ಗಂಗಾಧರೇಶ್ವರ ದೇವಾಲಯದ ಶಿವಲಿಂಗವನ್ನು ಸ್ಪರ್ಶಿಸಲಿದೆ ಸೂರ್ಯರಶ್ಮಿ
ಬೆಂಗಳೂರು (ಜ. 14): ಇಂದು ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ಸೂರ್ಯ ತನ್ನ ಪಥವನ್ನು ಬದಲಾಯಿಸುವ ದಿನವಿದು. ವರ್ಷದ ಮೊದಲ ಎಳ್ಳು ಬೆಲ್ಲ ಹಬ್ಬದ ಹಿನ್ನೆಲೆಯಲ್ಲಿ ಇಂದು ಶಿವನ ಆಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಇಂದು ವಿಶೇಷ ಅಭಿಷೇಕ ಮಾಡಲಾಗುತ್ತದೆ. ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಸೂರ್ಯದೇವ ಶಿವಲಿಂಗವನ್ನು ಸ್ಪರ್ಶಿಸಲಿದ್ದಾನೆ. ಈ ಐತಿಹಾಸಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸಾಲುಗಟ್ಟಿ ನಿಲ್ಲುತ್ತಾರೆ.
ಇಂದು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಾಯಿಸಲಿದ್ದಾನೆ. ಸೂರ್ಯ ಪಥ ಬದಲಿಸುವಾಗ ಶಿವನಿಗೆ ನಮಿಸಲಿದ್ದಾನೆ. ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯಿಂದ ಪುಳಕಿತನಾದ ಶಿವನನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂದು ಸಂಜೆ 5:17ರಿಂದ 5:22ರೊಳಗೆ ಸೂರ್ಯನ ಕಿರಣಗಳು ಶಿವಲಿಂಗವನ್ನು ಆವರಿಸಲಿದೆ.
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಇಂದು ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುವುದು. ಹೀಗಾಗಿ, ಬೆಳಗ್ಗೆಯಿಂದಲೇ ಭಕ್ತರು ದರ್ಶನಕ್ಕೆ ಬರುತ್ತಿದ್ದು, ವಿಶೇಷ ಪೂಜೆ ಹಿನ್ನೆಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಂದು ಬೆಳಗ್ಗೆ 7ರಿಂದ ಪಂಚಾಮೃತ, ರುದ್ರಾಭಿಷೇಕವಿರಲಿದ್ದು, ಶಿವನ ಮಂಗಳಾರತಿಗೆ ಮುಂಜಾನೆಯಿಂದಲೇ ಭಕ್ತರ ದಂಡು ಕಾದು ನಿಂತಿದೆ. ಇಂದು ಸಂಜೆ ಶಿವಲಿಂಗದ ಮೇಲೆ ಬೀಳುವ ಸೂರ್ಯರಶ್ಮಿಯನ್ನು ಕಣ್ತುಂಬಿಕೊಳ್ಳಲು ಗವಿ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಪೆಂಡಾಲ್ ಹಾಕಿ, ಎಲ್ಇಡಿ ಟಿವಿ ಅಳವಡಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ದೇವಸ್ಥಾನದೊಳಗೆ ಬಿಡಲಾಗುವುದು.
ರಾಜ್ಯಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ಪ್ರಯುಕ್ತ ಕಬ್ಬು, ಹೂವು-ಹಣ್ಣುಗಳ ಖರೀದಿಯೂ ಜೋರಾಗಿದೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್ನಲ್ಲಿ ಕೂಡ ಹೂವು- ಹಣ್ಣು ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಕೆಆರ್ ಮಾರ್ಕೆಟ್ನಲ್ಲಿ ಹಬ್ಬದ ವ್ಯಾಪಾರದ ಭರಾಟೆ ಜೋರಾಗಿದೆ. ವ್ಯಾಪಾರದ ನಡುವೆ ಕೊರೋನಾ ಮರೆತ ಜನರು ಬೆಳಗ್ಗೆಯೇ ಹಬ್ಬದ ಆಚರಣೆಗೆ ಹೂ ಹಣ್ಣು, ಕಬ್ಬಿನ ಖರೀದಿಗೆ ಮುಗಿಬಿದ್ದಿದ್ದಾರೆ
ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿ ಕೆಆರ್ ಮಾರ್ಕೆಟ್ನಲ್ಲಿ ಮಾರಾಟ ನಡೆಸಲಾಗುತ್ತಿದೆ. ಸರಿಯಾದ ಮಾಸ್ಕ್ ಬಳಕೆಯಿಲ್ಲ, ಸಾಮಾಜಿಕ ಅಂತರ ಇಲ್ಲವೇ ಇಲ್ಲ. ಕಾಟಾಚಾರಕ್ಕೆ ಮೂವರು ಮಾರ್ಷಲ್ ಗಳಿಂದ ದಂಡ ಹಾಕುವ ಕಾರ್ಯ ನಡೆಯುತ್ತಿದೆ. ಬೆರಳಣಿಕೆ ಮಂದಿಗಷ್ಟೇ ಮಾಸ್ಕ್ ದಂಡ ಹಾಕಿದ ಮಾರ್ಷಲ್ಗಳು ಉಳಿದವರನ್ನು ನೋಡಿಯೂ ನೋಡದಂತೆ ಓಡಾಡುತ್ತಿದ್ದಾರೆ.