ಹಿಂದೂ ದೇವರುಗಳ ಬಗ್ಗೆ ಅಪಪ್ರಚಾರ: ತಾಂಡವ್ ವೆಬ್ ಸೀರೀಸ್ ನಿರ್ದೇಶಕರ ವಿರುದ್ಧ ಎಫ್ಐಆರ್
ಲಖನೌ: ತಾಂಡವ್ ವೆಬ್ ಸೀರೀಸ್ ನಲ್ಲಿ ಹಿಂದೂ ದೇವರುಗಳನ್ನು ತಪ್ಪಾಗಿ ಚಿತ್ರಿಸಿ ಅಪಪ್ರಚಾರ ಮಾಡಿರುವ ಆರೋಪದಡಿ ವೆಬ್ ಸೀರೀಸ್ ನ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಹಾಗೂ ಬರಹಗಾರ ಗೌರವ್ ಸೋಲಂಕಿ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ.
ಹಿಂದೂ ದೇವರುಗಳನ್ನು ತಪ್ಪಾಗಿ ಚಿತ್ರಿಸಿ ಧಾರ್ಮಿಕ ಸೌಹಾರ್ದತೆಯನ್ನು ಕದಡುವ ಯತ್ನವಾಗಿದೆ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಹಜರತ್ ಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಮರ್ ನಾಥ್ ಯಾದವ್ ಅವರು ಒರಿಜಿನಲ್ ಕಂಟೆಂಟ್ ಗಾಗಿ ಅಮೇಜಾನ್ ಪ್ರೈಮ್ ನ ಭಾರತದ ಮುಖ್ಯಸ್ಥ ಅಪರ್ಣ ಪುರೋಹಿತ್, ಪ್ರೊಡ್ಯೂಸರ್ ಹಿಮಾಂಶು ಕೃಷ್ಣ ಮೆಹ್ರಾ ಹಾಗೂ ಇನ್ನಿತರ ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ನಲ್ಲಿ ಹೆಸರಿರುವ ವ್ಯಕ್ತಿಗಳ ತನಿಖೆ ನಡೆಸಲು ಹಜರತ್ ಗಂಜ್ ನ ಪೊಲೀಸ್ ಠಾಣೆಯ ತಂಡ ಮುಂಬೈಗೆ ತೆರಳಲಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಲಾಗಿದೆ. ತಾಂಡವ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.