ಗಡಿ ವಿಚಾರದಲ್ಲಿ ಮತ್ತೆ ಮಹಾ ಕ್ಯಾತೆ…! ಗಡಿಯ ಹಲವು ಪ್ರದೇಶ ಕರ್ನಾಟಕ ಆಕ್ರಮಿತ ಭಾಗವಾಗಿದ್ದು ಅದನ್ನು ಮಹಾರಾಷ್ಟ್ರಕ್ಕೆ ವಿಲೀನ ಮಾಡ್ತೇವೆ: ಉದ್ಧವ್ ಠಾಕ್ರೆ
ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕ್ಯಾತೆ ತೆಗೆದಿದ್ದಾರೆ. ಗಡಿಯ ಹಲವು ಪ್ರದೇಶಗಳನ್ನು ಕರ್ನಾಟಕ ಅಕ್ರಮಿತ ಭಾಗ ಎಂದು ಠಾಕ್ರೆ ಕರೆದಿದ್ದಾರೆ. ಈ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನ ಮಾಡಿಕೊಳ್ಳಲು ನಮ್ಮ ಸರ್ಕಾರ ಬದ್ಧ ಎಂದು ಘೋಷಣೆ ಮಾಡಿದ್ದಾರೆ.
ಅಮಿತ್ ಶಾ ಕರ್ನಾಟಕ ಭೇಟಿ ಹೊತ್ತಲ್ಲೇ ಉದ್ಧವ್ ಠಾಕ್ರೆ ಗಡಿ ವಿಚಾರ ಕೆದಕಿ ಉದ್ಧಟತನ ತೋರಿದ್ದಾರೆ. ಉದ್ಧವ್ ಠಾಕ್ರೆ ಹೇಳಿಕೆಗೆ ಕರ್ನಾಟಕದ ಎಲ್ಲೆಡೆ ಆಕ್ರೋಶ ವ್ಯಕ್ತವಾಗ್ತಿದೆ. ಇಂಥಾ ಕಾರ್ಯಕ್ಕೆ ಮುಂದಾದ್ರೆ ರಕ್ತಪಾತ ಆಗುತ್ತೆ ಎಂದು ಕನ್ನಡ ಸಂಘಟನೆಗಳು ಎಚ್ಚರಿಸಿವೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಹಾ ಸಿಎಂ ಉದ್ಧವ್ ಠಾಕ್ರೆ ಬೆಳಗಾವಿ ಗಡಿ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಕರ್ನಾಟಕ ಆಕ್ರಮಿತ ಮರಾಠಿ ಭಾಷಿಕ ಹಾಗೂ ಸಂಸ್ಕೃತಿಯ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸಲು ನಾವು ಬದ್ಧರಾಗಿದ್ದೇವೆ. ಇದು ಗಡಿ ಹೋರಾಟದಲ್ಲಿ ಭಾಗಿಯಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿ ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಬೆಳಗಾವಿಯನ್ನು ಮೈಸೂರು ಜಿಲ್ಲೆಗೆ ಸೇರಿಸಿದ್ದನ್ನು ವಿರೋಧಿಸಿ ಪ್ರತಿವರ್ಷ ಜನವರಿ 17ಕ್ಕೆ ಎಂಇಎಸ್ ಹುತಾತ್ಮ ದಿನಾಚರಣೆ ಹಾಗೂ ಪ್ರತಿಭಟನೆ ನಡೆಸುತ್ತಾ ಬರ್ತಿದೆ.