ಭೂತಾನ್ ಗೆ ಉಡುಗೊರೆಯಾಗಿ 1.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ರವಾನಿಸಿದ ಭಾರತ
ಮಹಾಮಾರಿ ಕೊರೊನಾ ವೈರಸ್ ವಿರುದ್ಧ ದೇಶದಲ್ಲಿ ಎರಡು ಲಸಿಕೆಗಳು ಅಭಿವೃದ್ಧಿಗೊಂಡಿದ್ದು, ಈಗಾಗಲೇ ದೇಶದಲ್ಲಿ ಅವುಗಳನ್ನ ನೀಡುವ ಕಾರ್ಯ ಆರಂಭಗೊಂಡಿದೆ. ಇದರ ಮಧ್ಯೆ ವಿದೇಶಕ್ಕೂ ಭಾರತದ ಲಸಿಕೆ ರವಾನೆಯಾಗಲು ಶುರುಗೊಂಡಿದೆ. ಇದೇ ಮೊದಲ ಸಲ 1.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಭಾರತದಿಂದ ಭೂತಾನ್ಗೆ ರವಾನೆಯಾಗಿವೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವ್ಯಾಕ್ಸಿನ್ ರವಾನೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ ಭೂತಾನ್ಗೆ ಕಳುಹಿಸಿದ 1.5 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ಇಂದು ಮಧ್ಯಾಹ್ನದ ಹೊತ್ತಿಗೆ ಭೂತಾನ್ನ ರಾಜಧಾನಿ ಟಿಂಫುಗೆ ತಲುಪಬಹುದು ಎಂದು ಹೇಳಲಾಗಿದೆ. ಈ ಮೂಲಕ ಭೂತಾನ್ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲಾದ ಕೊವಿಶೀಲ್ಡ್ ಲಸಿಕೆಯನ್ನು ಭಾರತದಿಂದ ಕೊಡುಗೆಯಾಗಿ ಪಡೆದುಕೊಳ್ಳುತ್ತಿರುವ ದೇಶವಾಗಿದೆ.
ಈ ಹಿಂದೆಯೂ ಭಾರತ ಭೂತಾನ್ಗೆ ಪ್ಯಾರಸಿಟಮಲ್, ಹೈಡ್ರೋಕ್ಸಿಕ್ಲೋರಿಕ್ವಿನ್, ಎನ್-95 ಮಾಸ್ಕ್, ಎಕ್ಸ್ ರೇ ಯಂತ್ರ, ಟೆಸ್ಟ್ ಕಿಟ್ ಸೇರಿ ಸುಮಾರು 2.8 ಕೋಟಿ ರೂ ಮೌಲ್ಯದ ಔಷಧ ಮತ್ತು ಔಷದೋತ್ಪನ್ನ ಮೆಡಿಕಲ್ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ.
ಒಟ್ಟು 1 ಲಕ್ಷ 50 ಸಾವಿರ ಡೋಸ್ ಕೋವಿಶಿಲ್ಡ್ ಲಸಿಕೆ ಬೂತಾನ್ನ ತಿಂಫುಗೆ ಇಂದು ತಲುಪಲಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಡ್ ವ್ಯಾಕ್ಸಿನ್ ಅನ್ನು ಭಾರತದಿಂದ ಮೊದಲ ಬಾರಿಗೆ ಭೂತಾನ್ಗೆ ಉಡುಗೊರೆಯಾಗಿ ರಫ್ತು ಮಾಡಲಾಗಿದೆ.