ಪೊಲೀಸರು ತಡೆಹಿಡಿದರೆ ಇದ್ದಲ್ಲೇ ಕುಳಿತು ಹೆದ್ದಾರಿ, ರಸ್ತೆ ತಡೆಹಿಡಿದು ರೈತರ ಪರ ಪ್ರತಿಭಟಿಸಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಬೆಂಗಳೂರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ತಡೆಹಿಡಿದಿದ್ದೇ ಆದರೆ, ಇದ್ದಲ್ಲಿಯೇ ಹೆದ್ದಾರಿ, ರಸ್ತೆಗಳನ್ನು ತಡೆಹಿಡಿದು ರೈತರ ಪರ ಪ್ರತಿಭಟನೆ ನಡೆಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆ.ಶಿವಕುಮಾರ್ ಅವರು, ಪೊಲೀಸರು ಬೆಂಗಳೂರಿಗೆ ಬರಲು ಬಿಡುತ್ತಿಲ್ಲ, ವಾಹನಗಳನ್ನು ತಡೆಹಿಡಿಯುತ್ತಿದ್ದಾರೆಂದು ಸಾಕಷ್ಟು ಬೆಂಬಲಿಗರು ಹಾಗೂ ರೈತರು ದೂರವಾಣಿ ಕರೆ ಮಾಡುತ್ತಿದ್ದಾರೆ. ಅಂತವಹವರು ಇದ್ದಲ್ಲಿಂದಲೇ ಹೆದ್ದಾರಿ ಹಾಗೂ ರಸ್ತೆಗಳನ್ನು ತಡೆಹಿಡಿದು ರೈತರ ಪರ ಪ್ರತಿಭಟನೆ ನಡೆಸಬೇಕು ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳದಂತೆ ಮಾಡಲು ಬಿಜೆಪಿ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತದೆ ಎಂಬುದು ನಮಗೆ ಗೊತ್ತಿದೆ. ಸಾಧ್ಯವಾದಷ್ಟು ಜನರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಬಂದು ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರೈತರಿಗೆ ಅವಕಾಶ ನೀಡಲಾಗುತ್ತಿಲ್ಲ. ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲ. ದೇಶದ ಮೂಲೆ ಮೂಲೆಯಲ್ಲಿಯೂ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ರಸ್ತೆಗಳಲ್ಲಿ ನಮ್ಮ ವಾಹನಗಳನ್ನು ತಡೆಯಲಾಗುತ್ತಿದೆ. ಕಾಯ್ದೆ ರದ್ದುಗೊಳ್ಳುವವರೆಗೂ ನಾವು ಪ್ರತಿಭಟನೆ ನಡೆಸುತ್ತಲೇ ಇರುತ್ತೇವೆಂದಿದ್ದಾರೆ.