ನೇತಾಜಿ ಸುಭಾಷ್ ಚಂದ್ರಬೋಸ್ ರ 125ನೇ ಜನ್ಮ ವಾರ್ಷಿಕೋತ್ಸವ: ರಾಷ್ಟ್ರನಾಯಕರು, ಗಣ್ಯರಿಂದ ‘ಪರಾಕ್ರಮ ದಿವಸ’ಆಚರಣೆ

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬ್ರಿಟಿಷರ ವಿರುದ್ಧ ವೀರ ಹೋರಾಟ ನಡೆಸಿ ಅಮರರಾದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ದೇಶಾದ್ಯಂತ ಶನಿವಾರ ಪರಾಕ್ರಮ್ ದಿವಸ್ ಆಗಿ ಆಚರಿಸಲಾಗುತ್ತಿದೆ. ಸುಭಾಷ್ ಚಂದ್ರಬೋಸ್ ಅವರ ಜನ್ಮ ದಿನದ ಅಂಗವಾಗಿ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

1897ರ ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಒಡಿಶಾದ ಕಟಕ್ ನಲ್ಲಿ ಜನಿಸಿದ್ದರು. ಈ ದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸಲಾಗುತ್ತಿದೆ.ನೇತಾಜಿಯವರ 125ನೇ ವರ್ಷದ ಜನ್ಮದಿನ ಇಂದು ಆಗಿರುವುದರಿಂದ ಈ ವರ್ಷವಿಡೀ ವಿಶೇಷವಾಗಿ ಆಚರಿಸಲಾಗುತ್ತಿದೆ. ಜನವರಿ 23ನ್ನು ಪ್ರತಿವರ್ಷ ಪರಾಕ್ರಮ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು.

ಇಂದು ಕೋಲ್ಕತ್ತಾದಲ್ಲಿ ಪರಾಕ್ರಮ ದಿವಸದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮೂಲಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಸಂದರ್ಭದಲ್ಲಿ ಗೌರವ ಸಲ್ಲಿಸಿದ್ದಾರೆ. ಅಪ್ರತಿಮ ಧೈರ್ಯ, ಸಾಹಸ ಮೆರೆದ ರಾಷ್ಟ್ರನಾಯಕನನ್ನು ಗೌರವಿಸಲು ಪರಾಕ್ರಮ ದಿವಸವನ್ನು ನಾವೆಲ್ಲರೂ ಆಚರಿಸುತ್ತಿರುವುದು ಸಮಯೋಚಿತವಾಗಿದೆ. ಅಸಂಖ್ಯಾತ ಜನರ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿದವರು ನೇತಾಜಿಯವರು ಎಂದಿದ್ದಾರೆ.

ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ದೂರದೃಷ್ಟಿಯ ನಾಯಕ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ನೇತಾಜಿ ಶೌರ್ಯ, ದೃಢ ನಿಶ್ಚಯ ಮತ್ತು ತ್ಯಾಗವನ್ನು ವ್ಯಕ್ತಿಗತಗೊಳಿಸಿದ್ದಾರೆ. ನಮ್ಮ ತಾಯ್ನಾಡನ್ನು ಬ್ರಿಟಿಷ್ ಆಡಳಿತದ ನೊಗದಿಂದ ಮುಕ್ತಗೊಳಿಸುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸಿದ್ದಾರೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ನೀಡಿದ ಅಪಾರ ಕೊಡುಗೆಗಾಗಿ ರಾಷ್ಟ್ರವು ಎಂದೆಂದಿಗೂ ಕೃತಜ್ಞರಾಗಿರಬೇಕು ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರವು ದೇಶದ ಸ್ವಾತಂತ್ರ್ಯಕ್ಕಾಗಿ ಅವರ ತ್ಯಾಗ ಮತ್ತು ಸಮರ್ಪಣೆಯನ್ನು ಸದಾ ನೆನಪಿಸಿಕೊಳ್ಳುತ್ತದೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ, ನೇತಾಜಿಯವರ 125ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಗುವಾಹಟಿಯಲ್ಲಿ ಪುಷ್ಪ ನಮನ ಸಲ್ಲಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *