ಅಬ್ಬಬ್ಬಾ… ಗಂಡನಿಗೆ 1248 ಕೋಟಿ ರೂ. ನೀಡಿ ವಿಚ್ಛೇದನ ಪಡೆದ ಖ್ಯಾತ ಗಾಯಕಿ ಅಡೆಲ್‌!

ಹಾಲಿವುಡ್‌ನ ಖ್ಯಾತ ಗಾಯಕಿ ಅಡೆಲ್‌ ಅವರ ಸಂಸಾರದಲ್ಲಿ ಇತ್ತೀಚೆಗೆ ಬಿರುಗಾಳಿ ಬೀಸಿತ್ತು. ಅವರ ಪತಿ ಸೈಮನ್‌ ಕನೆಕಿ ಜೊತೆ ಸಾಮರಸ್ಯ ಕಳೆದುಕೊಂಡಿದ್ದರು. ಪರಿಣಾಮ, ವಿಚ್ಛೇದನ ಬಯಸಿದ್ದ ಅಡೆಲ್‌, ಅದನ್ನು ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಆದರೆ ಅದಕ್ಕಾಗಿ ಅವರು ನೀಡಿರುವ ಹಣ ಒಂದು, ಎರಡು ಕೋಟಿ ರೂ.ಗಳಲ್ಲ! ಬರೋಬ್ಬರಿ 1248 ಕೋಟಿ ರೂ.!

ಅಡೆಲ್‌ ಪತಿ ಸೈಮನ್‌ ಕನೆಕಿ ಕೂಡ ದೊಡ್ಡ ಉದ್ಯಮಿ. ಕಳೆದ ಕೆಲವು ವರ್ಷಗಳಿಂದ ದಾಂಪತ್ಯ ಜೀವನ ಆರಂಭಿಸಿದ್ದ ಅವರ ಬದುಕಿನಲ್ಲಿ ಯಾಕೋ ಇತ್ತೀಚೆಗೆ ಬಿರುಕು ಮೂಡಿತ್ತು. ಅದು ವಿಚ್ಛೇದನ ಪಡೆಯುವ ಮಟ್ಟಕ್ಕೆ ಹೋಗಿದೆ. ಲಾಸ್‌ ಏಂಜಲಿಸ್‌ನಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿದೆ. ಗಂಡನಿಗೆ ಪರಿಹಾರವಾಗಿ ಗಾಯಕಿ ಅಡೆಲ್‌ ಅವರು 171 ಮಿಲಿಯನ್‌ ಡಾಲರ್‌ (ಸುಮಾರು 1248 ಕೋಟಿ ರೂ.) ನೀಡಿದ್ದಾರೆ ಎಂದು ವರದಿ ಆಗಿದೆ.

ಗ್ರ್ಯಾಮಿ ಮತ್ತು ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಗಾಯಕಿ ಅಡೆಲ್‌ ಅವರು 2011ರಲ್ಲಿ ಸೈಮನ್‌ ಕನೆಕಿ ಜೊತೆ ಡೇಟಿಂಗ್‌ ಮಾಡಲು ಆರಂಭಿಸಿದರು. 2012ರಲ್ಲಿ ಅವರಿಗೆ ಏಂಜೆಲೋ ಎಂಬ ಪುತ್ರ ಜನಿಸಿದ್ದ. ಆದರೆ ಈ ಜೋಡಿ ಮದುವೆ ಆಗಿದ್ದು ಮಾತ್ರ 2016ರಲ್ಲಿ! ಆ ಮದುವೆಗೆ ಕೆಲವೇ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ.

ತಾವಿಬ್ಬರೂ ದೂರಾಗಲು ನಿರ್ಧರಿಸಿದ್ದೇವೆ ಎಂದು 2019ರ ಏಪ್ರಿಲ್‌ನಲ್ಲಿ ಅಡೆಲ್‌ ಮತ್ತು ಸೈಮನ್‌ ಕನೆಕಿ ಘೋಷಿಸಿದ್ದರು. ಅಡೆಲ್‌ ಅವರೇ ವಿಚ್ಛೇದನ ಬಯಸಿದ್ದರು. ಸದ್ಯ 8 ವರ್ಷದವನಾಗಿರುವ ಅವರ ಪುತ್ರ ಏಂಜೆಲೋನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಇಬ್ಬರಿಗೂ ವಹಿಸಲಾಗಿದೆ. ವಿಚ್ಛೇದನ ಪಡೆದಿದ್ದರೂ ಕೂಡ ಮಗನನ್ನು ಪ್ರೀತಿಯಿಂದ ಬೆಳೆಸುವುದರಲ್ಲಿ ತಾವಿಬ್ಬರೂ ಬದ್ಧರಾಗಿದ್ದೇವೆ ಎಂದು ಅಡೆಲ್‌ ಮತ್ತು ಸೈಮನ್‌ ಕನೆಕಿ ಅವರು ಕೋರ್ಟ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *