ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಲಡಾಖ್ ಟ್ಯಾಬ್ಲೋ ಪ್ರದರ್ಶನ
ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ ಟ್ಯಾಬ್ಲೋ ಭಾಗವಹಿಸಲಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು.
ಲಡಾಖ್‌ನ ಟ್ಯಾಬ್ಲೋ ಲೇಹ್ ಜಿಲ್ಲೆಯ ಥಿಕ್ಸೆ ಬೆಟ್ಟದ ಮೇಲಿರುವ ಸುಂದರ ಥಿಕ್ಸೆ ಮಠವನ್ನು ಒಳಗೊಂಡಿರಲಿದೆ. ಇದು ಈ ಪ್ರದೇಶದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದೆನಿಸಿದೆ.
ಇದು ಲೇಹ್ ಬಳಿಯ ಹ್ಯಾನ್ಲೆನಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯವನ್ನು ಸಹ ಒಳಗೊಂಡಿದೆ. “ಲಡಾಖ್ ನ ಟ್ಯಾಬ್ಲೋ ಲೇಹ್ ಜಿಲ್ಲೆಯ ಥಿಕ್ಸೆ ಬೆಟ್ಟದ ಮೇಲಿರುವ ಸುಂದರ ಥಿಕ್ಸೆ ಮಠವನ್ನು ಹೊಂದಿರಲಿದೆ. ಇದು ಈ ಪ್ರದೇಶದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ” ಎಂದು ಸಿಂಗ್ ಹೇಳಿದರು.
ಕೇಂದ್ರ ಸರ್ಕಾರವು 2019 ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಿದೆ. ಜನವರಿ 26 ರಂದು ನಡೆಯುವ ವಾರ್ಷಿಕ ಪೆರೇಡ್ ನಲ್ಲಿ ಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಲು ಸಜ್ಜಾಗಿದೆ.
ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಟ್ಯಾಬ್ಲೋ ಹಾಗೂ ರಾಫೇಲ್ ಯುದ್ಧ ವಿಮಾನಗಳು 2021 ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ. ಉತ್ತರ ಪ್ರದೇಶದ ಟ್ಯಾಬ್ಲೋದಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಅಯೋಧ್ಯೆಯ ರಾಮ ಮಂದಿರದ ಪ್ರತಿಕೃತಿ ಇರುತ್ತದೆ. ಇದು ದೇವಾಲಯ ಪಟ್ಟಣಕ್ಕೆ ಸಂಬಂಧಿಸಿದ ಸಂಸ್ಕೃತಿ, ಸಂಪ್ರದಾಯ ಮತ್ತು ಕಲೆಗಳನ್ನು ಪ್ರದರ್ಶಿಸುತ್ತದೆ.
ಒಂಬತ್ತನೇ ಸಿಖ್ ಗುರು ಶ್ರೀ ಗುರು ತೇಜ್ ಬಹದ್ದೂರ್ ಅವರ ಸರ್ವೋಚ್ಚ ತ್ಯಾಗದ ವಿಷಯ ಪಂಜಾಬಿನ ಟ್ಯಾಬ್ಲೋ ಪ್ರದರ್ಶಿಸಿದ್ದರೆ ಉತ್ತರಾಖಂಡದ ‘ಕೇದಾರಖಂಡ್’ ಅನ್ನು ಆ ರಾಜ್ಯದ ಟ್ಯಾಬ್ಲೋ ಪ್ರದರ್ಶಿಸಲಿದೆ. ಕರ್ನಾಟಕದ ಟ್ಯಾಬ್ಲೋ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಹಂಪಿಯ ಸ್ಮಾರಕದ ಪ್ರತಿಕೃತಿಯನ್ನು ಹೊಂದಿರಲಿದೆ.
ಆದಾಗ್ಯೂ, ಈ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆ ಹಿಂದಿನ ವರ್ಷಗಳಿಗಿಂತ ಬಹಳ ಭಿನ್ನವಾಗಿರುತ್ತದೆ ಏಕೆಂದರೆ ಇದು ಕೋವಿಡ್ ಸಾಂಕ್ರಾಮಿಕದ ಮಧ್ಯೆ ನಡೆಯಲಿದೆ. ಯೋಧರು ಮಾಸ್ಕ್ ಧರಿಸಿ ಕಾಣಿಸಿಕೊಳ್ಳುತ್ತಾರೆ. ಈ ವರ್ಷ ಗಣರಾಜ್ಯೋತ್ಸವದ ಮೆರವಣಿಗೆಗೆ 25,000 ಪ್ರೇಕ್ಷಕರು ಮಾತ್ರ ಸಾಕ್ಷಿಯಾಗಲಿದ್ದಾರೆ. ಅಲ್ಲದೆ ಐದು ದಶಕಗಳಿಗಿಂತ ಹೆಚ್ಚು ಅವಧಿಯಲ್ಲಿ ಮುಖ್ಯ ಅತಿಥಿಯಿಲ್ಲದ ಮೊದಲ ಗಣರಾಜ್ಯೋತ್ಸವ ಮೆರವಣಿಗೆ ಇದಾಗಿದೆ. ಇದಕ್ಕೂ ಮೊದಲು 1952, 1953 ಮತ್ತು 1966 ರಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮುಖ್ಯ ಅತಿಥಿಗಳು ಭಾಗವಹಿಸಿರಲಿಲ್ಲ.