ಜ. 26 ರಂದು ರಸ್ತೆಗಿಳಿಯುವ ಮುನ್ನ ಎಚ್ಚರ..! ಪ್ರತಿಭಟನೆ ಬಿಸಿ ನಿಮಗೂ ತಟ್ಟಬಹುದು..!
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಜನವರಿ 26 ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದಾರೆ. ಈಗಾಗಲೇ 56 ದಿನಗಳಿಂದ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರು, ಜನವರಿ 26ರಂದು ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ರಾಜ್ಯದಲ್ಲೂ ಸಹಾ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಮುಂದಾಗಿವೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್.. ನೂತನ ರೈತ ಮಸೂದೆಗಳನ್ನ ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನ ಬೆಂಬಲಿಸಿ ರಾಜ್ಯದಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪೆರೇಡ್ ನಡೆಯಲಿದೆ. ರೈತರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸುವ ಮೂಲಕ ಬೃಹತ್ ಪೆರೇಡ್ ನಡೆಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಮ್ಮ ಟ್ರ್ಯಾಕ್ಟರ್ ಮೂಲಕ ರಾಜಧಾನಿಗೆ ಆಗಮಿಸಲಿದ್ದಾರೆ. 10 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಕಳೆದ ಸುಮಾರು 2 ತಿಂಗಳಿನಿಂದ ದೆಹಲಿಯಲ್ಲಿ ಕೊರೆಯುವ ಚಳಿಯಲ್ಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಹೋರಾಟದ ಅಂತಿಮ ರೂಪ ಪ್ರಕಟವಾಗಿದೆ. ಜನವರಿ 26 ರ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರಧಾನಿ ಕೆಂಪುಕೋಟೆ ಮೇಲೆಧ್ವಜಾರೋಹಣ ಮಾಡುತ್ತಾರೆ . ಅಲ್ಲಿಯವರೆಗೂ ನಾವು ಯಾವುದೇ ಪ್ರತಿಭಟನೆ ಮಾಡಲ್ಲ. ಪ್ರಧಾನಿ ಹಾಗೂ ಮುಖ್ಯಮಂತ್ರಿ ದೇಶಕ್ಕೆ ಹಾಗೂ ನಾಡಿಗೆ ಸಂದೇಶ ಕೊಡುವವರೆಗೂ ಯಾವುದೇ ಹೋರಾಟ ಇರೋದಿಲ್ಲ. ಬಳಿಕ ನಮ್ಮ ಪರೇಡ್ ಆರಂಭಿಸುವುದಾಗಿ ಹೇಳಿದ್ದಾರೆ.
ತುಮಕೂರು ರಸ್ತೆಯ ನೈಸ್ ಜಂಕ್ಷನ್ ನಿಂದ ಪೆರೇಡ್ ಆರಂಭವಾಗುತ್ತೆ..ಸಾವಿರಾರು ವಾಹನಗಳ ಮೂಲಕ ಪರೇಡ್ ನಡೆಯಲಿದೆ..ನೈಸ್ ಜಂಕ್ಷನ್, ಗೊರಗುಂಟೆಪಾಳ್ಯ, ಸರ್ಕಲ್ ಮಾರಮ್ಮ ದೇವಸ್ಥಾನ ಮುಂಭಾಗ, ಮಲ್ಲೇಶ್ವರಂ, ಆನಂದ್ ರಾವ್ ವೃತ್ತ ಮೂಲಕ ಫ್ರೀಡಂ ಪಾರ್ಕ್ವರೆಗೆ ರಾಲಿ ಇರಲಿದೆ. ರೈತರು, ಮಹಿಳೆಯರು, ದಲಿತರು, ಕಾರ್ಮಿಕರು, ಜನಪರ ಸಂಘಟನೆಗಳು ಱಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.