ಬಟ್ಟೆ ಧರಿಸಿದಾಗ ಅಪ್ರಾಪ್ತೆಯ ಮೈ ಮುಟ್ಟಿದರೆ ಲೈಂಗಿಕ ದೌರ್ಜನ್ಯ ಅಲ್ಲ: ಬಾಂಬೆ ಹೈಕೋರ್ಟ್!

ಮುಂಬಯಿ: ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ವಿಚಾರದಲ್ಲಿ ವಿವಾದಕ್ಕೆ ಕಾರಣವಾಗಬಲ್ಲ ತೀರ್ಪೊಂದನ್ನು ಬಾಂಬೆ ಹೈಕೋರ್ಟ್ ನೀಡಿದೆ.

ಅಪ್ರಾಪ್ತ ಬಾಲಕಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಬಟ್ಟೆ ಧರಿಸಿದ್ದಾಗ ಖಾಸಗಿ ಅಂಗ ಸ್ಪರ್ಶಿಸಿದ್ದರೆ ಪೋಕ್ಸೋ(POCSO) ಕಾಯ್ದೆಯಡಿ ಶಿಕ್ಷೆ ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶದಿಂದಲೇ ದೇಹದಿಂದ ದೇಹಕ್ಕೆ ನೇರ ಸಂಪರ್ಕವಾದಾಗ ಮಾತ್ರ POCSO ಕಾಯ್ದೆಯಡಿ ಶಿಕ್ಷೆ ನೀಡಬಹುದು. ಚರ್ಮದಿಂದ ಚರ್ಮಕ್ಕೆ ಸ್ಪರ್ಶವಾದಾಗ ಮಾತ್ರ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಬೇಕಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಪ್ರಾಪ್ತ ಬಾಲಕಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪುಷ್ಪಾ ಗನೇಡಿವಾಲಾ, ಅಪರಾಧಿಗೆ ಸೆಕ್ಷನ್ 354 IPCಯಡಿ ಒಂದು ವರ್ಷದ ಜೈಲುಶಿಕ್ಷೆ ನೀಡಿ ತೀರ್ಪು ನೀಡಿದರು.

ಆದರೆ ಪ್ರಕರಣವನ್ನು ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ನಿರಾಕರಿಸಿದ ಪುಷ್ಪಾ ಗನೇಡಿವಾಲಾ, ಬಟ್ಟೆ ಧರಿಸಿದ್ದಾಗ ಅಪ್ರಾಪ್ತೆಯ ದೇಹ ಮುಟ್ಟುವುದನ್ನು ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಅಪ್ರಾಪ್ತೆ ಬಟ್ಟೆ ಧರಿಸಿದ್ದಾಗ ಆಕೆಯ ಎದೆ ಭಾಗವನ್ನು ಮುಟ್ಟಿದರೆ ಅದು ಲೈಂಗಿಕ ದೌರ್ಜನ್ಯದ ಉದ್ದೇಶವಾಗಿತ್ತು ಎಂದು ಹೇಳಲು ಬರುವುದಿಲ್ಲ. ಒಂದು ವೇಳೆ ಬಟ್ಟೆಯೊಳಗೆ ಕೈಹಾಕಿ ಆಕೆಯ ಖಾಸಗಿ ಅಂಗವನ್ನು ಸ್ಪರ್ಶಿಸಿದ್ದರೆ ಅದು ಖಂಡಿತವಾಗಿಯೂ ಲೈಂಗಿಕ ದೌರ್ಜನ್ಯವಾಗಲಿದೆ ಎಂದು ನ್ಯಾಯಾಧೀಶರು ಹೇಳಿದರು.

ಇನ್ನು ಬಾಂಬೆ ಹೈಕೋರ್ಟ್ ತೀರ್ಪು ಹಲವು ಚರ್ಚೆಗೆ ಇಂಬು ನೀಡಿದ್ದು, ಪ್ರಕರಣದಲ್ಲಿ ಆರೋಪಿಯ ಉದ್ದೇಶ ಏನು ಎಂಬುದು ಅಪ್ರಾಪ್ತೆ ಬಟ್ಟೆ ಧರಿಸಿದ್ದಾಳೋ ಅಥವಾ ಇಲ್ಲವೋ ಎಂಬುದರ ಮೇಲೆ ನಿರ್ಧಾರವಾಗಲಿದೆಯೇ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *