ಹೆತ್ತವರಿಗೆ ದೇವಾಲಯ ಕಟ್ಟಿ ಮೂರ್ತಿ ಸ್ಥಾಪಿಸಿದ ಮಕ್ಕಳು
ಇಂದಿನ ಕಾಲದಲ್ಲಿ ವಯಸ್ಸಾದ ಮೇಲೆ ಹೆತ್ತವರನ್ನು ಮಕ್ಕಳು ನೋಡಿಕೊಳ್ಳೋ ರೀತಿಯೇ ಬದಲಾಗುತ್ತಿದೆ. ಕೆಲವರು ಹೆತ್ತ ತಂದೆ-ತಾಯಿಗಳನ್ನ ಸರಿಯಾಗಿ ನೋಡಿಕೊಳ್ಳದೆ ಮನೆಯಿಂದ ಹೊರಗೆ ಹಾಕೋದು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ಇಲ್ಲೊಬ್ಬರು ಹೆತ್ತವರ ಸವಿನೆನಪಿಗಾಗಿ ಭವ್ಯವಾದ ಮೂರ್ತಿ ಪ್ರತಿಷ್ಟಾಪನೆ ಮಾಡಿ ನಿತ್ಯ ಪೂಜೆ ಮಾಡಿದ್ದಾರೆ.
ಹಾಲಿನ ಕಲ್ಲಿನಲ್ಲಿ ಕಟೆದ ಭವ್ಯವಾದ ಮೂರ್ತಿ ಪ್ರತಿಷ್ಠಾನ ಮಾಡಿರೋ ಮಕ್ಕಳು, ಮೂರ್ತಿಗೆ ಪೂಜೆ ಮಾಡೋ ವಿಧಿ ವಿಧಾನಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಥದ್ದೊಂದು ಅಪರೂಪದ ದೃಶ್ಯಗಳಿಗೆ ಸಾಕ್ಷಿಯಾದದ್ದು ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ನಿರಗುಡಿ ಗ್ರಾಮ. ಗ್ರಾಮದಲ್ಲಿ ಪುತ್ರನೋರ್ವ ತನ್ನ ತಾಯಿ ಮತ್ತು ತಂದೆಯರ ಮೂರ್ತಿ ಪ್ರತಿಷ್ಠಾನೆ ಮಾಡಿ ಹೆತ್ತವರ ಋಣ ತೀರಿಸಿದ್ದಾನೆ. ನಿರಗುಡಿ ಗ್ರಾಮದ ವಿಶ್ವನಾಥ್ ಮತ್ತು ಲಕ್ಷ್ಮೀಬಾಯಿ ಕಳೆದ ನಾಲ್ಕು ವರ್ಷಗಳ ಹಿಂದೆ ಅಕಾಲಿಕವಾಗಿ ನಿಧನರಾಗಿದ್ದರು. ತಂದೆ ತಾಯಿಯರನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದ ಮಗ ದಶರಥ ಪಾತ್ರೆ, ತಂದೆ ಮತ್ತು ತಾಯಿಯ ನಾಲ್ಕನೇ ಪುಣ್ಯಸ್ಮರಣೆ ಪ್ರಯುಕ್ತ ಮತ್ತು ಅವರ ಸವಿನೆನಪಿಗಾಗಿ ತಮ್ಮದೇ ಸ್ಥಳದಲ್ಲಿ ಚಿಕ್ಕದಾದ ದೇವಸ್ಥಾನ ನಿರ್ಮಿಸಿದ್ದಾರೆ. ಆ ದೇವಸ್ಥಾನದಲ್ಲಿ ತಮ್ಮ ತಂದೆ ವಿಶ್ವನಾಥ್ ಮತ್ತು ತಾಯಿ ಲಕ್ಷ್ಮೀಬಾಯಿ ಅವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದಾರೆ.
ಹೆತ್ತವರಿಗೆ ವಯಸ್ಸಾಗುವಾಗ ಅನಾರೋಗ್ಯಕ್ಕೆ ಒಳಪಡುತ್ತಾರೆಂದು ಅವರನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆಂದು ಕೆಲವು ಮಕ್ಕಳು ಆಶ್ರಮ ಹಾಗೂ ಬೀದಿಗೆ ತಳ್ಳುತ್ತಾರೆ. ಸರಿಯಾಗಿ ನೋಡಿಕೊಳ್ಳೊಕೆ ಆಗದೆ ಮಕ್ಕಳೇ ಬೀದಿಗೆ ತಳ್ಳಿರೋ ಅನೇಕ ಉದಾಹರಣೆಗಳು ಸಹ ನಮ್ಮ ಮಧ್ಯದಲ್ಲಿವೆ. ಹೀಗಿರುವಾಗ ನಿರಗುಡಿಯ ಮಕ್ಕಳು ತಮ್ಮ ಹೆತ್ತವರು ತಮ್ಮೊಟ್ಟಿಗೆ ಇಲ್ಲದಿದ್ದರೂ ಸಹ, ಅವರ ನೆನಪಿಗಾಗಿ ಮಂದಿರ ನಿರ್ಮಿಸಿ ಪೂಜೆ ಸಲ್ಲಿಸಿ ಅವರ ಕಾರ್ಯಗಳನ್ನು ಸಲ್ಲಿಸುತ್ತೇವೆ ಹಾಗೂ ಎಲ್ಲರಿಗೂ ಮಾದರಿಯಾಗಿದ್ದಾರೆ.