ರಿಯಲ್ ಲೈಫ್ನಲ್ಲಿ ಮುದಲ್ವನ್; ಒಂದು ದಿನ ಸಿಎಂ ಆಗಿ 20 ವರ್ಷದ ಹುಡುಗಿ ಮಾಡಿದ್ದೇನು?
ನವದೆಹಲಿ(ಜ. 25): ಎರಡು ದಶಕದ ಹಿಂದೆ ತೆರೆಗೆ ಬಂದಿದ್ದ ‘ಮುದಲ್ವನ್’ ತಮಿಳು ಸಿನಿಮಾ ಮತ್ತು ‘ನಾಯಕ್’ ಹಿಂದಿ ಸಿನಿಮಾ ನೋಡಿದವರಿಗೆ ಒಂದು ದಿನದ ಮುಖ್ಯಮಂತ್ರಿ ಕಲ್ಪನೆ ಇರಬಹುದು. ಅಂಥಹುದೇ ಈಗ ರಿಯಲ್ ಲೈಫ್ನಲ್ಲಿ ಆಗಿದೆ. ಇದಕ್ಕೆ ಸಾಕ್ಷಿಯಾಗಿದ್ದು ಉತ್ತರಾಖಂಡ್ ರಾಜ್ಯ. ರಾಷ್ಟ್ರೀಯ ಹೆಣ್ಣು ಮಗು ದಿನವಾದ ನಿನ್ನೆ ಒಂದು ದಿನದ ಮಟ್ಟಿಗೆ ಉತ್ತರಾಖಂಡ್ ರಾಜ್ಯ ಹೊಸ ಮುಖ್ಯಮಂತ್ರಿಯನ್ನ ಕಂಡಿತು. ಹರಿದ್ವಾರದ 20 ವರ್ಷದ ಪದವಿ ವಿದ್ಯಾರ್ಥಿನಿ ಸೃಷ್ಟಿ ಗೋಸ್ವಾಮಿ ಭಾನುವಾರ ಸಿಎಂ ಆಗಿ ಕಾರ್ಯನಿರ್ವಹಿಸಿದರು. ರಾಜಧಾನಿ ಡೆಹ್ರಾಡೂನ್ನಲ್ಲಿ ನಡೆದ ಮಕ್ಕಳ ವಿಧಾನಸಭೆ ಅಧಿವೇಶನದ ವೇಳೆ ಸೃಷ್ಟಿ ಅವರು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಮಕ್ಕಳು ಮತ್ತು ಹೆಣ್ಮಕ್ಕಳ ಸುರಕ್ಷತೆ, ಯುವ ಸಮುದಾಯದಲ್ಲಿ ಬೇರೂರಿರುವ ಡ್ರಗ್ ಬಳಕೆ ಹಾಗೂ ಉತ್ತರಾಖಂಡ್ನಲ್ಲಿ ವಲಸೆ ಈ ಮೂರು ಸಮಸ್ಯೆಗಳ ವಿಚಾರದಲ್ಲಿ ಸೃಷ್ಟಿ ಗೋಸ್ವಾಮಿ ತಮ್ಮ ಸಲಹೆಗಳನ್ನ ನೀಡಿದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ನ್ಯಾಷನಲ್ ಗರ್ಲ್ ಡೇ ಅಂಗವಾಗಿ ಸೃಷ್ಟಿ ಗೋಸ್ವಾಮಿ ಅವರು ಮಕ್ಕಳ ವಿಧಾನಸಭೆಯ ಮುಖ್ಯಮಂತ್ರಿಯಾಗಿ ಸದನವನ್ನ ಮುನ್ನಡೆಸಿದ್ದು ರಾಜ್ಯದ ಎಲ್ಲಾ ಹೆಣ್ಮೆಕ್ಕಳ ಗೌರವದ ಸಂಕೇತವಾಗಿದೆ. ಇಂಥ ಕ್ರಮಗಳು ಹೆಣ್ಮಕ್ಕಳಗೆ ಸ್ಫೂರ್ತಿ ತಂದು ಸಮಾಜಕ್ಕೆ ಅವರಿಗಿರುವ ಜವಾಬ್ದಾರಿಗಳನ್ನ ನಿಭಾಯಿಸಲು ಸಹಾಯವಾಗುತ್ತದೆ. ನಮ್ಮ ಹೆಣ್ಮಕ್ಕಳು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಗೋಸ್ವಾಮಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ನಾನು ಹಾರೈಸುತ್ತೇನೆ ಎಂದು ಹೇಳಿದರು.
ಬಿಎಸ್ಸಿ ಅಗ್ರಿಕಲ್ಚರ್ ವಿದ್ಯಾರ್ಥಿನಿಯಾಗಿರುವ ಸೃಷ್ಟಿ ಗೋಸ್ವಾಮಿ ಅವರನ್ನ 2018ರಲ್ಲಿ ರಾಜ್ಯ ಮಕ್ಕಳ ಆಯೋಗವು ಅಣಕು ಬಾಲ ವಿಧಾನಸಭೆಯ ಸಿಎಂ ಆಗಿ ಆಯ್ಕೆ ಮಾಡಿತ್ತು. ಪ್ರಜಾತಂತ್ರ ವ್ಯವಸ್ಥೆಯನ್ನ ಮಕ್ಕಳು ಅರಿಯಲು ಹಾಗೂ ಮಕ್ಕಳ ಹಕ್ಕು ರಕ್ಷಣೆಗಾಗಿ ಇಂಥದ್ದೊಂದು ವಿನೂತನ ಪ್ರಯೋಗ ಮಾಡಲಾಯಿತು. ಸೃಷ್ಟಿ ಗೋಸ್ವಾಮಿ ತಾನು ಒಂದು ದಿನದ ಸಿಎಂ ಆಗಿ ಅಧಿವೇಶನ ಮುನ್ನಡೆಸಿದ್ದು ಮಾತ್ರವಲ್ಲ ಸರ್ಕಾರ ನಡೆಸುತ್ತಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೋಸ್ವಾಮಿ, ಮಕ್ಕಳು ಹಾಗೂ ಹೆಣ್ಮಕ್ಕಳ ಸುರಕ್ಷತೆ, ಯುವಸಮುದಾಯದಲ್ಲಿ ಹೆಚ್ಚುತ್ತಿರುವ ಡ್ರಗ್ ಬಳಕೆ ಹಾಗೂ ಗುಡ್ಡಗಾಡು ವಲಸೆ ಸಮಸ್ಯೆಗಳ ವಿಚಾರದಲ್ಲಿ ಹಲವು ಪ್ರಮುಖ ಸಲಹೆಗಳನ್ನ ತಾನು ನೀಡಿದ್ಧಾಗಿ ಹೇಳಿದರು.
“ಮಕ್ಕಳ ಸಮಸ್ಯೆ ಏನೆಂದು ನನಗೆ ಅರಿವಿದ್ದ ಹಿನ್ನೆಲೆಯಲ್ಲಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಆದ್ಯತೆಯಾಗಿತ್ತು. ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ನನ್ನ ಈ ಸಲಹೆಗಳನ್ನ ನೀಡುತ್ತೇನೆ. ಆ ಮೂಲಕ ಮುಖ್ಯಮಂತ್ರಿಗಳಿಗೆ ಇವುಗಳನ್ನ ತಲುಪಿಸುವ ಕೆಲಸವಾಗುತ್ತದೆ” ಎಂದು ಸೃಷ್ಟಿ ಗೋಸ್ವಾಮಿ ಮಾಹಿತಿ ನೀಡಿದರು.
ಮುಂದೊಂದು ದಿನ ರಾಜಕಾರಣಿಯಾಗುತ್ತೀರಾ ಎಂಬ ಪ್ರಶ್ನೆಗೆ ಸೃಷ್ಟಿ ಗೋಸ್ವಾಮಿ, ತಾನೀಗಾಗಲೀ ಬಾಲ ಅಧಿವೇಶನದ ಭಾಗವಾಗಿದ್ದೇನೆ. ಭವಿಷ್ಯದಲ್ಲಿ ಅವಕಾಶ ಒದಗಿದರೆ ರಾಜಕಾರಣಕ್ಕೆ ಪ್ರವೇಶ ಕೊಟ್ಟರೂ ಕೊಡಬಹುದು ಎಂದು ಹೇಳಿದರು.
ಸೃಷ್ಟಿ ತಂದೆ ಪ್ರವೀಣ್ ಗೋಸ್ವಾಮಿ ಅವರು ತಮ್ಮ ಮಗಳಿಗೆ ಸಿಎಂ ಯೋಗ ಕೂಡಿ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. “ಜೀವನದಲ್ಲಿ ಉನ್ನತ ಹಂತಕ್ಕೆ ಏರಲು ನನ್ನ ಮಗಳು ಹಾಗೂ ಇತರ ಹೆಣ್ಮಕ್ಕಳಿಗೆ ಇದು ಸ್ಫೂರ್ತಿಯಾಗುತ್ತದೆ. ಅವರು ಶ್ರಮ ವಹಿಸಿ ಕೆಲಸ ಮಾಡಿದರೆ ಏನನ್ನ ಬೇಕಾದರೂ ಸಾಧಿಸಲು ಅಡ್ಡಿ ಇಲ್ಲ” ಎಂದು ಪ್ರವೀಣ್ ಗೋಸ್ವಾಮಿ ಅಭಿಪ್ರಾಯಪಟ್ಟರು.