ಕಾಳಿ ನದಿಯಲ್ಲಿ ಇನ್ಮುಂದೆ ಮರಳುಗಾರಿಕೆ ಕನಸು?; ತುಕ್ಕು ಹಿಡಿದು ಗುಜರಿ ಸೇರಲು ತಯಾರಾಗಿವೆ ಯಂತ್ರಗಳು
ಕಾರವಾರ(ಜ.25): ಒಂದು ದಶಕದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಯೆಂದರೆ ಮರಳು ಗಣಿಗಾರಿಕೆಗೆ ಹೆಸರುವಾಸಿ. ಇಲ್ಲಿಂದ ಗೋವಾಕ್ಕೆ ಮರಳು ಸಾಗಾಟದಲ್ಲಿ ನಡೆಯುತ್ತಿದ್ದ ಭರ್ಜರಿ ದಂಧೆ ಒಂದು ಕಡೆಯಾದರೆ, ಇನ್ನೊಂದು ಕಡೆ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಕೈ ತುಂಬ ಸಂಬಳ. ಆದ್ರೆ ಈಗ ಎಲ್ಲವೂ ಬದಲಾಗಿದೆ. ಕಾಳಿ ನದಿಯಲ್ಲಿ ಮರಳುಗಾರಿಕೆ ಸ್ಥಗಿತವಾಗಿದೆ. ಮರಳುಗಾರಿಕೆಗೆ ಬೇಕಾದ ಬೃಹತ್ ಯಂತ್ರಗಳು, ದೋಣಿಗಳು ಈಗ ದಡದಲ್ಲಿ ಮೌನಕ್ಕೆ ಶರಣಾಗಿ ತುಕ್ಕು ಹಿಡಿದು ಮುಂದೆ ಕೆಲಸಕ್ಕೆ ಬಾರದಾಗಿದೆ.
ಕಾಳಿ ನದಿಯ ಒಡಲಗೆದು ಮರಳನ್ನು ಬಗೆದು ಇಡೀ ಗೋವಾ ರಾಜ್ಯದ ಕಟ್ಟಡ, ಸೇತುವೆ, ರಸ್ತೆಗಳನ್ನು ನಿರ್ಮಿಸಿದ್ದರು. ಕರ್ನಾಟಕಕ್ಕೆ ಹೆಚ್ಚಾಗಿ ಮರಳು ಸಾಗಾಟವಾಗದಿದ್ದರೂ ಗೋವಾ ರಾಜ್ಯಕ್ಕೆ ದಿನಕ್ಕೆ ಸುಮಾರು 500ರಷ್ಟು ಟಿಪ್ಪರ್ಗಳು ಮರಳು ಸಾಗಾಟ ಮಾಡುತ್ತಿದ್ದವು. ಕಾಳಿ ನದಿಯ ನೀರಿನ ಮೇಲೆ ನೂರಾರು ಬೋಟುಗಳು ಮರಳನ್ನು ಹೊತ್ತೊಯ್ಯುತ್ತಿದ್ದವು. ಕಾರ್ಮಿಕರಿಗೆ ಕೈ ತುಂಬ ಸಂಬಳ ಉತ್ತಮ ಜೀವನ ನಿರ್ವಹಣೆ ನಡೆಯುತ್ತಿತ್ತು. ಆದ್ರೆ ಕಳೆದ ಏಳೆಂಟು ವರ್ಷದಿಂದ ಕಾಳಿ ನದಿಯಲ್ಲಿ ಮರಳುಗಾರಿಕೆಗೆ ನಿಷೇಧ ಹೇರಲಾಯಿತು. ಈಗ ಎಲ್ಲವೂ ಸ್ಥಗಿತವಾಗಿದೆ.
ಕೈ ತುಂಬ ಸಂಬಳ ತೆಗೆದುಕೊಳ್ಳುತ್ತಿದ್ದ ಸಾವಿರಾರು ಕಾರ್ಮಿಕರ ಬದುಕು ದುಸ್ತರವಾಗಿದೆ. ಕಾರವಾರದ ಮರಳನ್ನ ನಂಬಿರುವ ಗೋವಾ ರಾಜ್ಯದ ಉದ್ದಿಮೆದಾರರಿಗೂ ಅಪಾರ ನಷ್ಟವಾಗಿದೆ. ಕಾರವಾರದಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯಲ್ಲಿ ಉತ್ತರ ಕರ್ನಾಟಕ ಬಾಗಲಕೋಟೆ, ಹುಬ್ಬಳ್ಳಿ, ವಿಜಯಪುರ, ಹಾವೇರಿ ಭಾಗದ ಕಾರ್ಮಿಕರೇ ಹೆಚ್ಚಾಗಿ ಉದ್ಯೋಗ ಕಂಡು ಕೊಂಡಿದ್ದರು. ಆದ್ರೆ ಈಗ ಇಲ್ಲಿ ಮರಳುಗಾರಿಕೆ ಸ್ಥಗಿತವಾಗಿದ್ರಿಂದ ಕಾರ್ಮಿಕರು ಗೋವಾ ಕಡೆ ಕೂಲಿಗಾಗಿ ತೆರಳಿದ್ರೆ, ಇನ್ನು ಕೆಲವರು ತಮ್ಮ ತಮ್ಮ ತವರು ಸೇರಿದ್ದಾರೆ.
ಕಾಳಿ ನದಿಯಲ್ಲಿ ಮರಳು ತೆಗೆಯುತ್ತಿದ್ದ ಯಂತ್ರಗಳಿಗೆ ತುಕ್ಕು
ಕಾಳಿ ನದಿಯಲ್ಲಿ ಮರಳುಗಾರಿಕೆ ಸ್ಥಗಿತವಾಗಿ ಬರೋಬ್ಬರಿ ಏಳೆಂಟು ವರ್ಷ ಕಳೆದಿವೆ. ಈ ನಡುವೆ ಮರಳುಗಾರಿಕೆ ಆರಂಭಿಸಲು ಸಾಕಷ್ಟು ಹೋರಾಟಗಳು ನಡೆದವು. ಆದ್ರೆ ಸರಕಾರ ಮರಳುಗಾರಿಕೆ ನಡೆಸಲು ಅನುಮತಿ ನೀಡಲು ಹಿಂದೇಟು ಹಾಕಿತು. ಇದರ ಪರಿಣಾಮವಾಗಿ ಮರಳು ಉದ್ಯಮಿಗಳ ಹೋರಾಟ ಇಂದಿಗೂ ನಡೆಯುತ್ತಲೇ ಇದೆ. ಆದ್ರೆ ಯಾವುದೇ ಫಲ ಸಿಕ್ಕಿಲ್ಲ. ಈಗ ಇಲ್ಲಿ ಮರಳು ತೆಗೆಯುತ್ತಿದ್ದ ಯಂತ್ರಗಳು ತುಕ್ಕು ಹಿಡಿದು ಲಡ್ಡಾಗಿ ಹೋಗಿದೆ. ನದಿಯ ದಡದಲ್ಲಿ ಮೌನಕ್ಕೆ ಶರಣಾಗಿ ಕೆಲಸಕ್ಕೆ ಬಾರದಾಗಿದೆ. ನೂರಾರು ದೋಣಿಗಳು ಲಡ್ಡಾಗಿ ಹೋಗಿದೆ. ಉದ್ಯಮಿಗಳು ಇವತ್ತು ಮರಳುಗಾರಿಕೆ ಆರಂಭವಾಗಬಹುದು, ನಾಳೆ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲೆ ಇದ್ದಾರೆ. ಆದ್ರೆ ಪರಿಕರಗಳು ಯಂತ್ರಗಳು ತುಕ್ಕು ಹಿಡಿದು ಗುಜರಿ ಸೇರಲು ತಯಾರಾಗಿವೆ.
ಈಗ ಕಾಳಿ ನದಿ ಕಡಲ ಜೀವರಾಶಿಗಳ ಸೂಕ್ಷ್ಮ ತಾಣಕಾಳಿ ನದಿಯಲ್ಲಿ ಈಗ ಮರಳುಗಾರಿಕೆ ನಡೆಯೋದು ಕನಸು ಮಾತ್ರ. ಕಾಳಿ ನದಿಯನ್ನ ಕಡಲ ಜೀವರಾಶಿಗಳ ಸೂಕ್ಷ್ಮ ತಾಣ ಎಂದು ಗುರುತಿಸಲಾಗಿದೆ. ಕೇಂದ್ರ ಪರಿಸರ ಇಲಾಖೆ ಇಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನಿರಾಕರಿಸಿದೆ. ಈ ಹಿನ್ನಲೆ ಯಲ್ಲಿ ಜಿಲ್ಲಾಡಳಿತ ಮರಳು ದಂಧೆ ನಡೆಸಲು ಅನುಮತಿ ನಿರಾಕರಿಸಿದೆ. ಕಡಲ ಜೀವರಾಶಿಗಳಿಗೆ ಮರಳುಗಾರಿಕೆ ಮಾಡಿದರೆ ಕಡಲ ಜೀವರಾಶಿಗಳ ಮಾರಣಹೋಮವಾಗುತ್ತೆ ಎಂದು ಮರಳುಗಾರಿಕೆ ಸಂಪೂರ್ಣ ನಿಷೇಧ ಬಿದ್ದಿದೆ.
ಮುಂದೆ ಹೋರಾಟ ನಿರಂತರವಾಗಿರಲಿದೆ, ಆದ್ರೆ ಮರಳುಕುಗಾರಿಕೆ ಆರಂಭವಾಗೋದು ಕನಸಾಗಿರಲಿದೆ. ಹೀಗೆ ಈ ಮರಳು ತೆಗೆದು ವೈಭೋಗದಲ್ಲಿ ಇದ್ದ ಯಂತ್ರಗಳು, ದೋಣಿಗಳು ಇವತ್ತು ತಮ್ಮ ಹಿಂದಿನ ಮರಳುಗಾರಿಕೆಯ ಇತಿಹಾಸ ಹೇಳಿ ದಡದಲ್ಲಿಇವೆ. ಇನ್ನು ಕೆಲವೇ ದಿನದಲ್ಲಿ ಈ ಯಂತ್ರಗಳು ಗುಜರಿ ಸೇರಲಿವೆ. ಆವಾಗ ಇಲ್ಲಿ ಮರಳುಗಾರಿಕೆ ನಡೆಯುತ್ತಿತ್ತು ಎಂದು ಹೇಳಲು ಯಾವ ಸಾಕ್ಷ್ಯ ವೂ ಇರಲ್ಲ.