ಶಶಿಕಲಾ ಇಂದೂ ಚೆನ್ನೈಗೆ ತೆರಳುವಂತಿಲ್ಲ; ಆಸ್ಪತ್ರೆಯಿಂದ ಚಿನ್ನಮ್ಮ ಇಂದು ಡಿಸ್ಚಾರ್ಜ್ ಆಗೋದು ಅನುಮಾನ

ಬೆಂಗಳೂರು (ಜ. 30): ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ 4 ವರ್ಷಗಳ ಹಿಂದೆ ಜೈಲು ಸೇರಿದ್ದ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಕೊರೋನಾ ಸೋಂಕಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಜೈಲಿನಿಂದ ರಿಲೀಸ್ ಆದರೂ ಶಶಿಕಲಾ ಅವರಿಗೆ ಚೆನ್ನೈಗೆ ಹೋಗದಂತಾಗಿತ್ತು. ಆದರೆ, ಇಂದು ಕೂಡ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದು ಅನುಮಾನ ಎನ್ನಲಾಗುತ್ತಿದೆ.

ಕೊರೋನಾ ಸೋಂಕಿನಿಂದ ಶಶಿಕಲಾ ಆಸ್ಪತ್ರೆಗೆ ದಾಖಲಾಗಿ ಇಂದಿಗೆ ಹತ್ತು ದಿ‌ನ ಕಳೆಯಲಿದ್ದು, ಚಿನ್ನಮ್ಮ ಡಿಸ್ಚಾರ್ಜ್ ಆಗುತ್ತಾರೆ ಎಂದು ವಕೀಲರು ಹೇಳಿದ್ದರು. ಆದರೆ, ಇಂದು ಮತ್ತೆ ಅವರಿಗೆ ಕೋವಿಡ್-19 ಟೆಸ್ಟ್ ಮಾಡಲಿದ್ದು, ನೆಗೆಟಿವ್ ರಿಪೋರ್ಟ್ ಬರಬೇಕು. ಅವರ ಆರೋಗ್ಯ ಸುಧಾರಣೆ ಬಗ್ಗೆ ಎಲ್ಲಾ ತಪಾಸಣೆಗಳನ್ನು ಇಂದು ವೈದ್ಯರು ಪೂರ್ಣಗೊಳಿಸಲಿದ್ದಾರೆ. ಸದ್ಯಕ್ಕೆ ಶಶಿಕಲಾ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ನಿನ್ನೆ ವೈದ್ಯರು ತಿಳಿಸಿದ್ದರು. ಇಂದು ಹೆಲ್ತ್ ಕಂಡಿಷನ್ ಹಾಗೂ ಕೋವಿಡ್ -19 ನೆಗೆಟಿವ್ ರಿಪೋರ್ಟ್ ಬಂದರೆ ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು.

ಆದರೆ, ಇಂದು ಆ ಪ್ರಕ್ರಿಯೆಗಳೆಲ್ಲ ಮುಗಿದು, ರಿಪೋರ್ಟ್​ ಬರುವಾಗ ತಡವಾಗುವುದರಿಂದ ಬಹುತೇಕ ನಾಳೆ ಬೆಳಗ್ಗೆ ಶಶಿಕಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಮೇಲೆ ಅವರನ್ನು ಮೆರವಣಿಗೆ ಮಾಡಲೇಬೇಕೆಂದು ‌ಮತ್ತೆ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಬೆಂಗಳೂರಿನಿಂದ ತಮಿಳುನಾಡಿನವರೆಗೆ ಶಶಿಕಲಾ ಅವರನ್ನು ಭರ್ಜರಿ ಸವಾರಿಗೆ ಮತ್ತೆ ಸಿದ್ದತೆ ನಡೆಸಲಾಗಿದೆ.

ಶಶಿಕಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ದಿನ ವಿಕ್ಟೋರಿಯ ಆಸ್ಪತ್ರೆ ಬಳಿ ಮತ್ತೆ ಬೆಂಬಲಿಗರ ದಂಡು ಸೇರಲಿದ್ದು, ಟಿ.ಟಿ ದಿನಕರನ್ ಜೊತೆ ಮುಖಂಡರು ಚರ್ಚಿಸಿದ್ದಾರೆ. ಈ ಮೆರವಣಿಗೆಗೆ ಸಕಾರಾತ್ಮಕವಾಗಿ ಸ್ಪಂದಿಸಿರೋ ಟಿ.ಟಿ ದಿನಕರನ್, ಪಕ್ಷದ ಜಿಲ್ಲಾಧ್ಯಕ್ಷರಿಂದ ಸ್ವಾಗತ ಬಯಸೋಕೆ ಸಿದ್ದತೆ ನಡೆಸಲಾಗಿದೆ.

ಇನ್ನು, ಕೋವಿಡ್- 19 ಪ್ರೋಟೋಕಾಲ್ ಪ್ರಕಾರ, 10 ದಿನ ಶಶಿಕಲಾ ಚಿಕಿತ್ಸೆ ಪಡೆಯಬೇಕು. ಇಂದಿಗೆ ಶಶಿಕಲಾ ಅವರ 10 ದಿನಗಳ ಆಸ್ಪತ್ರೆ ವಾಸ ಮುಗಿಯಬೇಕಿತ್ತು. ಆದರೆ, ನಾಳೆ ಅವರು ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಆಕ್ಸಿಜನ್ ಪಡೆಯುತ್ತಿದ್ದ ಶಶಿಕಲಾ ಇದೀಗ ಸ್ವಂತವಾಗಿ ಉಸಿರಾಡುತ್ತಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಬಹುಬೇಗ ಗುಣಮುಖರಾಗುತ್ತಿದ್ದಾರೆ. ಇಂದಿನ ತಪಾಸಣೆಯಲ್ಲಿ ಕೊರೋನಾ ನೆಗೆಟಿವ್ ರಿಪೋರ್ಟ್ ಬಂದರೆ ನಾಳೆ ವೈದ್ಯರು ಅವರನ್ನು ಡಿಸ್ಚಾರ್ಜ್ ಮಾಡಲಿದ್ದಾರೆ. ಇನ್ನು, ಆಂಬುಲೆನ್ಸ್ ಬೇಕಾಗಿಲ್ಲ ಕಾರಲ್ಲೇ ಪ್ರಯಾಣ ಮಾಡಬಹುದು ಎಂದು ವೈದ್ಯರ ಸಲಹೆ ನೀಡಿದ್ದಾರೆ. ಕಾರಲ್ಲಿ ಶಶಿಕಲಾ ಜೊತೆ ಒಂದಿಬ್ಬರು ಸಾಮಾಜಿಕ ಅಂತರದಲ್ಲಿ ಹೋಗಬಹುದು. ಮಾಸ್ಕ್ ಹಾಕುವುದರಿಂದ ಸಮಸ್ಯೆ ಇಲ್ಲ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಹೀಗಾಗಿ, ವಿಕ್ಟೋರಿಯಾದಿಂದ ಕಾರಲ್ಲೇ ಶಶಿಕಲಾ ಅವರನ್ನು ಚೆನ್ನೈಗೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಲಾಗಿದೆ. ಈ ನಡುವೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಬೆಂಬಲಿಗರಿಗೆ ಶಶಿಕಲಾ ಮುಖ ದರ್ಶನವಾಗಲಿದ್ದು, ಆಸ್ಪತ್ರೆ ಎದುರು ಸಾವಿರಾರು ಬೆಂಬಲಿಗರು ಜಮಾವಣೆಯಾಗುವ ಸಾಧ್ಯತೆ ಇದೆ. ಇನ್ನು, ಪೊಲೀಸರು ತಮಿಳುನಾಡಿನ ಬಾರ್ಡರ್ ವರೆಗೂ ಬಿಗಿ ಭದ್ರತೆಯಲ್ಲಿ ಕರೆದೊಯ್ಯಲು ಸಿದ್ದತೆ ನಡೆಸಿದ್ದಾರೆ. ಈ ವೇಳೆ ಶಶಿಕಲಾ ಕಾರಿನ‌ ಬೆಂಗಾವಲಾಗಿ ನೂರಾರು ವಾಹನಗಳು ಹೋಗಲಿವೆ. ಚೆನ್ನೈಗೆ ಹೋಗೋವರೆಗೂ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧ್ಯಕ್ಷರು ಶಶಿಕಲಾರಿಗೆ ಭರ್ಜರಿ ಸ್ವಾಗತ ಕೋರಿ ಹೂಮಳೆಗೈಯಲು ಸಿದ್ದರಾಗಿದ್ದಾರೆ. ಹೂ ಚೆಲ್ಲಿ ಸ್ವಾಗತ ಬಯಸಲು ಬೆಂಬಲಿಗರು ತೀರ್ಮಾನಿಸಿದ್ದಾರೆ.

ಇದೇ ರೀತಿ ಭರ್ಜರಿ ಹೂ ಮೆರವಣಿಗೆ ಮೂಲಕ ಚೆನೈ ಸೇರಲಿರೋ ಚಿನ್ನಮ್ಮ, ದಿ. ಜಯಲಲಿತಾ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ಆ ಬಳಿಕ ತಮಿಳುನಾಡಿನ ಚುನಾವಣೆಗೆ ರಣತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಪನ್ನೀರ ಸೆಲ್ವಂ ಮತ್ತು ಪಳನಿಸ್ವಾಮಿ ಶಶಿಕಲಾ ಅವರಿಗೆ ಟಕ್ಕರ್ ಕೊಡಲು ಜಯಲಲಿತಾರ ಸ್ಮಾರಕ ನಿರ್ಮಾಣ ಮಾಡಿದ್ದಾರೆ‌. ಜೊತೆಗೆ ಜಯಲಲಿತಾ ವಾಸವಾಗಿದ್ದ ಮನೆಯನ್ನು ಸಹ ಸ್ಮಾರಕ ಮಾಡುವ ಮೂಲಕ ಜಯಲಲಿತಾ ಶಿಷ್ಯಂದಿರೆಂದು ಗುರುತಿಸಿಕೊಳ್ಳುವ ಮೂಲಕ ಚಿನ್ನಮ್ಮನಿಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಶಶಿಕಲಾ ಡಿಸ್ಚಾರ್ಜ್ ಬಳಿಕ ರಾಜಕೀಯ ಚದುರಂಗದಲ್ಲಿ ಸಿಡಿದೇಳುತ್ತಾರಾ? ಅಥವಾ ಸುಮ್ಮನಾಗ್ತಾರಾ? ಎಂಬುದೇ ಕುತೂಹಲದ ಸಂಗತಿಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *