ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ
ಬೆಂಗಳೂರು; ಕೋವಿಡ್ -19ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಪೋಲಿಯೋ ಲಸಿಕೆ ನೀಡಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಿ. ಎಷ್ಟು ಬಾರಿ ಹಾಕಿದರೂ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ. ಪೋಲಿಯೋ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಜೀವ ರಕ್ಷಣೆಗೆ ಎರಡು ಹನಿ ಲಸಿಕೆ ಹಾಕಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಮಾಧ್ಯಮದವರು ವ್ಯಾಪಕ ಪ್ರಚಾರ ನೀಡಿ ಕಾರ್ಯಕ್ರಮ ಯಶಸ್ವಿಯಾಗಿಸಿ. ಪ್ರಧಾನಿ ನರೇಂದ್ರ ಮೋದಿ ಕೂಡ ಲಸಿಕೆ ಹಾಕುತಿದ್ದಾರೆ. ರಾಜ್ಯದಲ್ಲಿ 64 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
ಜನವರಿ 17 ರಂದೇ ಪಲ್ಸ್ ಪೋಲಿಯೋ ಲಸಿಕೆ ನೀಡಬೇಕಿತ್ತು. ಆದರೆ ಕೊರೋನಾ ಲಸಿಕೆ ಬಂದಿದ್ದರಿಂದ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಹೀಗಾಗಿ ಇಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದಲ್ಲಿ ಒಟ್ಟು 85,05,060 ಡೋಸ್ ಪೋಲಿಯೋ ಲಸಿಕೆ ಲಭ್ಯವಿದೆ. 1,10,179 ವ್ಯಾಕ್ಸಿನೇಟರ್ ಗಳು ಇದ್ದಾರೆ. 6,645 ಸೂಪರ್ ವೈಸರ್ ತಂಡ, 904 ಮೊಬೈಲ್ ತಂಡ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 32,908 ಬೂತ್ ಗಳನ್ನು ಸಿದ್ಧಪಡಿಸಲಾಗಿದೆ.
ಪಲ್ಸ್ ಪೋಲಿಯೋ ಲಸಿಕೆ ವಿಚಾರವಾಗಿ ನೆನ್ನೆ ಮಾಹಿತಿ ನೀಡಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು, ಲಸಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಚಾಲನೆ ನೀಡಲಿದ್ದಾರೆ. ಪೋಷಕರು ಹಿಂದೆ ಲಸಿಕೆ ಹಾಕಿಸಿದ್ದರೂ ಮತ್ತೆ ಹಾಕಿಸಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಕಳೆದ 10-11 ವರ್ಷಗಳಿಂದ ಪೊಲೀಯೋ ಸೋಂಕು ಕಂಡುಬಂದಿಲ್ಲ. ಭಾರತದಲ್ಲಿ ಈ ರೋಗ ನಿಮೂರ್ಲನೆಯಾಗಿದೆ. ಆದರೆ ಪಕ್ಕದ ಪಾಕಿಸ್ತಾನ, ಅಫ್ಫಾನಿಸ್ತಾನದಲ್ಲಿ ಈ ರೋಗ ಇರುವುದರಿಂದ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕಿದೆ ಎಂದು ಹೇಳಿದ್ದರು.