ಕೇಂದ್ರ ಬಜೆಟ್ 2021 ಮಂಡನೆಗೆ ಮುನ್ನ ಸೆನ್ಸೆಕ್ಸ್, ನಿಫ್ಟಿ ಏರಿಕೆ!
ನವದೆಹಲಿ: ಸೋಮವಾರ 2021ನೇ ಆರ್ಥಿಕ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಬಜೆಟ್ ಮಂಡನೆಗೆ ಮುನ್ನ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 443 ಅಂಕಗಳಷ್ಟು ಏರಿಕೆಯಾಗಿದೆ. ನಿಫ್ಟಿ 115 ಅಂಕಗಳ ಏರಿಕೆ ಕಂಡುಬಂದಿದೆ.
30 ಕಂಪೆನಿಗಳ ಷೇರುಗಳು ಇಂದು ಬೆಳಗ್ಗೆ ವಹಿವಾಟು ಆರಂಭದಿಂದ ಏರುಗತಿಯಲ್ಲಿಯೇ ವಹಿವಾಟು ನಡೆಸುತ್ತಿದ್ದು 443.06 ಅಥವಾ ಶೇಕಡಾ 0.96ರಷ್ಟು ಏರಿಕೆಯಾಗಿ 46 ಸಾವಿರದ 729ರಲ್ಲಿ ವಹಿವಾಟು ನಡೆಸಿದೆ. ಇನ್ನು ನಿಫ್ಟಿ 115 ಅಥವಾ ಶೇಕಡಾ 0.84ರಷ್ಟು ಏರಿಕೆಯಾಗಿ 13 ಸಾವಿರದ 750ರಲ್ಲಿ ವಹಿವಾಟು ನಡೆಸಿದೆ.
ಇಂದಿನ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್ ಡಿಎಫ್ ಸಿ, ಒಎನ್ ಜಿಸಿ, ಟೈಟಾನ್ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕುಗಳ ವಹಿವಾಟು ಪ್ರಮುಖವಾಗಿ ಲಾಭದತ್ತ ಸಾಗುತ್ತಿದೆ. 16 ಕಂಪೆನಿಗಳ ಷೇರುಗಳು ಏರುಮುಖದಲ್ಲಿವೆ.
ಇತ್ತೀಚಿನ ವರದಿ ಬಂದಾಗ ಸೆನ್ಸೆಕ್ಸ್ 46,833.91ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 13,770.80ರಲ್ಲಿ ನಡೆಸುತ್ತಿತ್ತು.