ಗುಜರಾತ್: ಕೊರೋನಾ ಲಸಿಕೆ ಪಡೆದ ಎರಡೇ ಗಂಟೆಯಲ್ಲಿ ಪೌರ ಕಾರ್ಮಿಕ ಸಾವು
ಅಹಮದಾಬಾದ್: ಗುಜರಾತ್‌ನ ವಡೋದರಾದಲ್ಲಿ ಭಾನುವಾರ ಕೊರೋನಾ ವೈರಸ್ ಲಸಿಕೆ ಪಡೆದ ಎರಡೇ ಗಂಟೆಯಲ್ಲಿ 30 ವರ್ಷದ ಪೌರ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಸಾವಿಗೆ ನಿಖರವಾದ ಕಾರಣ ಇನ್ನು ಪತ್ತೆಯಾಗಿಲ್ಲ.
ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಕಾರ್ಮಿಕನ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಕಾರ್ಮಿಕನ ಹಠಾತ್ ಸಾವಿಗೆ ಕೋವಿಡ್-19 ಲಸಿಕೆ ಕಾರಣ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅಧಿಕಾರಿಗಳು, ಮೃತ ಕಾರ್ಮಿಕ 2016ರಿಂದ ಹೃದಯ ಕಾಯಿಲೆ ಇರುವ ಇತಿಹಾಸ ಹೊಂದಿದ್ದರಿಂದ ಮತ್ತು ಅದಕ್ಕೆ ಔಷಧಿಗಳನ್ನು ತೆಗೆದುಕೊಳ್ಳದ ಕಾರಣ ಅವರು ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.
ಮೃತ ಪೌರ ಕಾರ್ಮಿಕ ಜಿಗ್ನೇಶ್ ಸೋಲಂಕಿ ಅವರು ವಡೋದರಾ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ(ವಿಎಂಸಿ) ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ ಅವರಿಗೆ ಲಸಿಕೆ ನೀಡಲಾಯಿತು. ಆದರೆ, ಕಲವೇ ಗಂಟೆಗಳ ನಂತರ, ಅವರು ಮನೆಯಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಎಸ್‌ಎಸ್‌ಜಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
“ಅವರು ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ನನಗೆ ತಿಳಿದಿರಲಿಲ್ಲ. ನಾವು ಇದರ ಬಗ್ಗೆ ಚರ್ಚೆ ಸಹ ಮಾಡಿರಲಿಲ್ಲ. ಲಸಿಕೆ ಹಾಕಿಸಿಕೊಂಡ ನಂತರ ಮನೆಗೆ ಬಂದಿದ್ದರು. ಮನೆಯಲ್ಲಿ ಮಗಳ ಜೊತೆ ಆಟವಾಡುವಾಗ ಕುಸಿದು ಬಿದ್ದರು. ಅವರ ಹಠಾತ್ ಸಾವಿಗೆ ಕೊರೋನಾ ಲಸಿಕೆ ಕಾರಣವಾಗಿರಬಹುದು” ಎಂದು ಸೋಲಂಕಿ ಅವರ ಪತ್ನಿ ದಿವ್ಯಾ ಹೇಳಿದ್ದಾರೆ.