ಕೇಂದ್ರ ಬಜೆಟ್ 2021: 2.5 ಲಕ್ಷ ರೂಗಿಂತ ಹೆಚ್ಚು ಮೊತ್ತದ ಪಿಎಫ್ ಗೆ ತೆರಿಗೆ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕೇಂದ್ರ ಸರ್ಕಾರ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಪಿಎಫ್ ಫಲಾನುಭವಿಗಳಿಗೆ ಶಾಕ್ ನೀಡಲಾಗಿದ್ದು, 2.5 ಲಕ್ಷ ರೂಗಿಂತ ಹೆಚ್ಚು ಮೊತ್ತದ ಪಿಎಫ್ ಗೆ ತೆರಿಗೆ ವಿಧಿಸಲಾಗಿದೆ.

ಹೌದು.. ನೌಕರರು ವರ್ಷಕ್ಕೆ 2.5 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಕಂತನ್ನು ಭವಿಷ್ಯ ನಿಧಿ ಗೆ ಪಾವತಿಸಿದರೆ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

2.5 ಲಕ್ಷ ರೂ.ಗಿಂತ ಹೆಚ್ಚುವರಿಯಾಗಿ ಎಷ್ಟು ಹಣ ಪಿಎಫ್ ಗೆ ಕಟ್ಟುತ್ತಾರೋ ಆ ಹಣಕ್ಕೆ ಲಭಿಸುವ ಬಡ್ಡಿಗೆ ಸಾಮಾನ್ಯ ದರದಲ್ಲಿ ಆದಾಯ ತೆರಿಗೆ ಪಾವತಿಸಬೇಕು. ದೊಡ್ಡ ಮೊತ್ತವನ್ನು ಭವಿಷ್ಯ ನಿಧಿಯಲ್ಲಿ ತೊಡಗಿಸಿ ತೆರಿಗೆ ಉಳಿಸುವ ಶ್ರೀಮಂತರಿಗೆ ಕಡಿವಾಣ ಹಾಕಲು ಈ ಕ್ರಮ ಜರುಗಿಸಲಾಗಿದೆ.

ಇನ್ನು ಈ ತೆರಿಗೆ ನೌಕರರು ಪಾವತಿಸುವ ಪಿಎಫ್ ಕಂತಿಗೆ ಲಭಿಸುವ ಬಡ್ಡಿಗಷ್ಟೇ ಅನ್ವಯವಾಗಲಿದ್ದು, ಕಂಪನಿ ಪಾವತಿಸುವ ಕಂತಿಗೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.  ಜೊತೆಗೆ ಪಿಎಫ್ ಕಂತು ಪಾವತಿಸುವ ನೌಕರರಲ್ಲೂ ತಿಂಗಳಿಗೆ 20,833 ರೂ. ವರೆಗೆ ಪಿಎಫ್ ಕಂತು ಕಟ್ಟುವವರಿಗೆ ತೆರಿಗೆ ಅನ್ವಯವಿಲ್ಲ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಆಯವ್ಯಯ ಕಾರ್ಯದರ್ಶಿ ಟಿ ವಿ ಸೋಮನಾಥನ್ ಅವರು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಆರು ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಈ ಪೈಕಿ ವರ್ಷಕ್ಕೆ 2.5 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಕಂತನ್ನು ಭವಿಷ್ಯ ನಿಧಿ ಗೆ ಪಾವತಿಸುವ ನೌಕರರ ಸಂಖ್ಯೆ ಶೇ.1ಕ್ಕಿಂತ ಕಡಿಮೆ ಇದೆ ಎಂದು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *