ACB Raid: ಅಕ್ರಮ ಆಸ್ತಿ ಸಂಪಾದನೆ ಆರೋಪ; ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 30 ಕಡೆ ಎಸಿಬಿ ದಾಳಿ
ಬೆಂಗಳೂರು (ಫೆ. 2): ಇಂದು ಬೆಳ್ಳಂಬೆಳಗ್ಗೆ ರಾಜ್ಯದ 30 ಕಡೆ ಎಸಿಬಿ ದಾಳಿ ನಡೆಸಲಾಗಿದೆ. ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 7 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್ನಲ್ಲಿ ದಾಳಿ ನಡೆಸಲಾಗಿದೆ.
ಕರ್ನಾಟಕದ 30 ಕಡೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೋಲಾರದ ಡಿಹೆಚ್ಓ, ಹುಬ್ಬಳ್ಳಿ ಇಇ, ಚಿತ್ರದುರ್ಗದ ಎಸಿಎಫ್ ಮನೆ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಹುಬ್ಬಳ್ಳಿ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮನೆ ಮೇಲೆ, ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಮನೆ ಮೇಲೆಯೂ ದಾಳಿ ನಡೆಸಲಾಗಿದೆ. ಬೆಂಗಳೂರಿನ ಯಶವಂತಪುರದ ಫ್ಲಾಟ್ನಲ್ಲೂ ದಾಖಲೆಗಳ ಶೋಧ ನಡೆಸಲಾಗಿದ್ದು, ಬೆಂಗಳೂರು ಎಸಿಬಿ ತಂಡದಿಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಕೋಲಾರದ ಡಿಹೆಚ್ಓ ಡಾ. ವಿಜಯ್ಕುಮಾರ್ಗೂ ಎಸಿಬಿ ಶಾಕ್ ಎದುರಾಗಿದೆ. ಅವರ ಮುಳಬಾಗಿಲು ಮನೆ, ಖಾಸಗಿ ಆಸ್ಪತ್ರೆ ಮೇಲೆ ರೇಡ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಫ್ಲಾಟ್ನಲ್ಲಿ ಪರಿಶೀಲನೆ ಮಾಡಲಾಗುತ್ತಿದ್ದು, ಚಿಂತಾಮಣಿ ಮನೆ ಸೇರಿದಂತೆ 6 ಕಡೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ರಾಜ್ಯಾದ್ಯಂತ ಮೂವತ್ತು ಕಡೆ ಎಸಿಬಿ ದಾಳಿ ನಡೆಸಲಾಗಿದ್ದು, 7 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ,ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್ನಲ್ಲಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ. ಪಾಂಡುರಂಗ ಗರಗ್ ಅವರ ವಿಜಯನಗರದ ಮನೆ, ಮಲ್ಲೇಶ್ವರಂ ಕಚೇರಿ, ಚಿತ್ರದುರ್ಗದ ಮನೆ ಸೇರಿ 5 ಕಡೆ ದಾಳಿ ನಡೆಸಲಾಗಿದೆ.
ಡಿ. ಪಾಂಡುರಂಗ ಗರಗ್ ಅವರ ವಿಜಯನಗರದ ಮನೆಯಲ್ಲಿ ಸಿಕ್ಕ ಚಿನ್ನಾಭರಣಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಧಾರವಾಡ, ಚಿತ್ರದುರ್ಗದಲ್ಲಿಯೂ ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.