ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ 15 ಸಾವಿರಕ್ಕೂ ಹೆಚ್ಚು ಶಾಲೆಗಳ ಬಲವರ್ಧನೆ: 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಸ್ತಾಪಿಸಲಾದ ಸುಧಾರಣೆಗಳ ಪ್ರಕಾರ 15 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲಾಗುತ್ತಿದೆ. ಇವುಗಳು ಇತರ ಶಾಲೆಗಳ ನಿರ್ವಹಣೆ ಮತ್ತು ಮಾರ್ಗದರ್ಶನಕ್ಕೆ ನೆರವಾಗಲಿದೆ ಎಂದು ಕೇಂದ್ರ ಬಜೆಟ್ ನಲ್ಲಿ ಹೇಳಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳು, ಖಾಸಗಿ ಶಾಲೆಗಳು ಹಾಗೂ ರಾಜ್ಯಗಳ ಸಹಭಾಗಿತ್ವದೊಂದಿಗೆ ಒಟ್ಟಾರೇ 100 ಹೊಸ ಸೈನಿಕ ಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಡಿ 15 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲಾಗುವುದು. ಅವುಗಳು ತಮ್ಮ ವಲಯಗಳಲ್ಲಿ ಮಾದರಿ ಶಾಲೆಗಳಾಗಿ ರೂಪುಗೊಳ್ಳುತ್ತವೆ. ಈ ನೀತಿಯ ಆದರ್ಶಗಳನ್ನು ಸಾಧಿಸಲು ಇತರ ಶಾಲೆಗಳಿಗೆ ಮಾರ್ಗದರ್ಶನ ನೀಡಲಿವೆ ಎಂದು ಬಜೆಟ್ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕಳೆದ ವರ್ಷ ಘೋಷಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಐದನೇ ತರಗತಿಯವರೆಗೂ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ, ಶಾಲಾ ವ್ಯಾಸಂಗದ ಕ್ರಮವಾದ 10 + 2 ರಚನೆಯನ್ನು 5 + 3 + 3 + 4 ರಚನೆಯೊಂದಿಗೆ ಬದಲಾವಣೆ, ಬೋರ್ಡ್ ಪರೀಕ್ಷೆ ಸುಲಭಗೊಳಿಸುವುದು ಮತ್ತಿತರ ಸುಧಾರಣೆ ಮಾಡಲಾಗುತ್ತಿದೆ. ನೂತನ ಶಿಕ್ಷಣ ನೀತಿ ಅಧಿಸೂಚನೆ ನಂತರ ಇದು ಮೊದಲ ಬಜೆಟ್ ಆಗಿದೆ. 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.

ದೇಶದಲ್ಲಿ ಪ್ರಸ್ತುತ 30 ಸೈನಿಕ ಶಾಲೆಗಳಿವೆ. ಶಿಕ್ಷಣ ಇಲಾಖೆ ಸಚಿವಾಲಯ ಮುಂಬರುವ ಆರ್ಥಿಕ ವರ್ಷದಲ್ಲಿ ಕಳೆದ ವರ್ಷ ಘೋಷಿಸಲಾದ 59,845 ಕೋಟಿ ಬದಲಿಗೆ 54,873.66 ಕೋಟಿ ಅನುದಾನ ಪಡೆಯಲಿದೆ. ಕೇಂದ್ರೀಯ ವಿದ್ಯಾಲಯಗಳು 6,800 ಕೋಟಿ ಅನುದಾನ ಪಡೆಯಲಿದ್ದು, ನವೋದಯ ವಿದ್ಯಾಲಯಗಳಿಗೆ 500 ಕೋಟಿ ಹೆಚ್ಚಿಸಲಾಗಿದೆ. ಕಳೆದ ವರ್ಷ 3,300 ಕೋಟಿ ನೀಡಲಾಗಿತ್ತು. ಈ ವರ್ಷ 3800 ಕೋಟಿ ನೀಡಲಾಗುತ್ತಿದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆ ಅನುದಾನ ಕೂಡಾ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ 11 ಸಾವಿರ ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಈ ಬಾರಿ ಅದನ್ನು 11,500 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *