Budget 2021 : ಇದೊಂದು ಆತ್ಮ ಬರ್ಬರ ಬಜೆಟ್- ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಕೋವಿಡ್ ಪರಿಹಾರಕ್ಕಾಗಿ “ಆತ್ಮನಿರ್ಭರ’ ಹೆಸರಲ್ಲಿ ಮೂರು ಪ್ಯಾಕೇಜ್ ಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ‘ಆತ್ಮಬರ್ಬರ’ ಬಜೆಟ್ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೊಂದು ರೀತಿಯಲ್ಲಿ “ ಆತ್ಮ ಬರ್ಬಾದ್’ (ವಿನಾಶ) ಬಜೆಟ್ ಕೂಡಾ ಹೌದು ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ (Union Budget) ಬಗ್ಗೆ ಸರಣಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಕರ್ನಾಟಕದ ಸಂಸದರಾಗಿದ್ದರೂ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋ (Metro)ಮತ್ತು ಬೆಂಗಳೂರು-ಚೆನ್ನೈ ಕಾರಿಡಾರ್ ಗೆ ನೀಡಿರುವ ಅನುದಾನ ಹೊಸದೇನಲ್ಲ. ಉಳಿದಂತೆ ಹಣಕಾಸು ಸಚಿವರು ಒಮ್ಮೆಯೂ ಕರ್ನಾಟಕದ ಹೆಸರನ್ನೂ ಕೂಡಾ ಎತ್ತಿಲ್ಲ ಕೊರೊನಾದಿಂದ (Coronavirus)ಸಂಕಷ್ಟಕ್ಕೆ ಒಳಗಾದವರಿಗೆ ಯಾವುದೇ ಪರಿಹಾರ ಬಜೆಟ್ ನಿಂದ ಸಿಕ್ಕಿಲ್ಲ. ಚುನಾವಣೆ ನಡೆಯುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಿಗೆ ಹೆಚ್ಚು ಹಣ ನೀಡಲಾಗಿದೆ. ಪ್ರತಿ ವರ್ಷ ಚುನಾವಣೆ (Election) ನಡೆಸಿದರೆ ನಮಗೂ ಹೆಚ್ಚಿನ ಅನುದಾನ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

020-2021ನೇ ಸಾಲಿಗೆ ಜಿಡಿಪಿ (GDP)ಬೆಳವಣಿಗೆಯನ್ನು ಶೇ.11ಕ್ಕೆ ಏರಿಸುವುದಾಗಿ ಕೇಂದ್ರ ಘೋಷಣೆ ಮಾಡಿದೆ. ಇದು ನಂಬಲು ಸಾಧ್ಯವೇ ? ಇದು ಸುಳ್ಳಿನ ಕಂತೆ. ಅಂಕಿ-ಅಂಶಗಳನ್ನು ನೀಡದೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ವಿವರಗಳನ್ನು ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು ಎಂದು ಹೇಳಿದ್ದಾರೆ.

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಚಾಲನೆ ನೀಡಿರುವುದು ರೈತರು (Farmers) ಸೇರಿದಂತೆ ಎಲ್ಲ ವರ್ಗದ ಜನಗಳ ಮೇಲೆ ಇನ್ನೊಂದು ಹೊಡೆತ. ಖಾಸಗೀಕರಣಗೊಂಡರೆ ರೈತರಿಗೆ ಈಗ ಲಭ್ಯ ಇರುವ ಉಚಿತ ವಿದ್ಯುತ್ ಖಂಡಿತ ಕಡಿತ ಆಗಲಿದೆ. ಇದರ ಜೊತೆಗೆ ಸಾಮಾನ್ಯ ಜನರ ಮನೆ ಬಳಕೆಯ ವಿದ್ಯುತ್ ಕೂಡಾ ದುಬಾರಿಯಾಗಲಿದೆ. ಉದ್ಯಮಿಗಳ ಮೇಲೆಯೂ ಹೆಚ್ಚಿನ ಹೊರೆ ಬೀಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕಲ್ಲಿದ್ದಲು, ಪಾಮ್ ಆಯಿಲ್, ಕಡಲೆ, ಬಟಾಣಿ, ಹತ್ತಿಯಿಂದ ಹಿಡಿದು ಸೇಬು, ಮದ್ಯದ ವರೆಗೆ ಎಲ್ಲದರ ಮೇಲೂ ಶೇಕಡಾ 2.5ರಿಂದ ಹಿಡಿದು ಶೇಕಡಾ ನೂರರ ವರೆಗೆ ಕೃಷಿ ಸೆಸ್ ಹೇರಲಾಗಿದೆ. ಇದರಿಂದಾಗುವ ಬೆಲೆ ಏರಿಕೆಗೆ ರೈತರೂ ಸೇರಿದಂತೆ ಎಲ್ಲರೂ ತಲೆಕೊಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾದಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ, ರೈತರ ಬೆಳೆಗೆ ಬೆಲೆ ಇಲ್ಲದೆ ದಿವಾಳಿ ಸ್ಥಿತಿಯಲ್ಲಿದ್ದಾರೆ, ಉದ್ಯಮಿಗಳು ಮಾರುಕಟ್ಟೆ ಇಲ್ಲದೆ ಕಷ್ಟದಲ್ಲಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಯಾವ ನಿರ್ದಿಷ್ಠ ಕ್ರಮಗಳು 2021-22ರ ಸಾಲಿನ ಬಜೆಟ್ ನಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *