ಅಯೋದ್ಯೆ ಮಸೀದಿ ನಿರ್ಮಾಣ ಜಾಗ ನಮ್ಮದು: ಸಹೋದರಿಯರಿಂದ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ದಾಖಲು

ಲಖನೌ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿರುವ ಜಾಗ ನಮ್ಮದು ಎಂದು ಹೇಳಿ ದೆಹಲಿ ಮೂಲದ ಇಬ್ಬರು ಸಹೋದರಿಯರು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ರಾಣಿ ಕಪೂರ್‌ ಅಲಿಯಾಸ್‌ ರಾಣಿ ಬಲೂಜಾ, ರಮಾರಾಣಿ ಪಂಜಾಬಿ ಎಂಬುವವರು ಈ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಜಾಗದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಹೋದರಿಯರು ಆರೋಪಿಸಿದ್ದಾರೆ. ಈ ಅರ್ಜಿ ವಿಚಾರಣೆ ಫೆ.8ರಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸಹೋದರಿಯರು ಅರ್ಜಿಯಲ್ಲಿ ಹೇಳಿರುವಂತೆ, ತಮ್ಮ ತಂದೆ ಜ್ಞಾನಚಂದ್ರ ಪಂಜಾಬಿ ಅವರು ದೇಶ ವಿಭಜನೆ ಸಂದರ್ಭದಲ್ಲಿ, 1947ರಲ್ಲಿ ಭಾರತಕ್ಕೆ ಬಂದು, ಅಯೋಧ್ಯೆಯಲ್ಲಿ ನೆಲೆಸಿದರು. ‘ಧನ್ನಿಪುರ ಗ್ರಾಮದಲ್ಲಿ ತಂದೆಗೆ ನಜುಲ್‌ ಇಲಾಖೆಯು 28 ಎಕರೆ ಜಮೀನನ್ನು ನೀಡಿತ್ತು. 5 ವರ್ಷಗಳ ಅವಧಿಗೆ ನೀಡಿದ್ದ ಜಮೀನಿನ ಮಾಲೀಕತ್ವ ನಂತರವೂ ಮುಂದುವರಿಯಿತು. ಕಂದಾಯ ಇಲಾಖೆಯಲ್ಲಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ತಂದೆ ಹೆಸರನ್ನು ಸೇರಿಸಲಾಗಿತ್ತು. ನಂತರದ ದಿನಗಳಲ್ಲಿ ತಂದೆಯ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ತಂದೆಯವರು ಅಯೋಧ್ಯೆಯಲ್ಲಿನ ನಜುಲ್‌ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಬಳಿಕ ಅಧಿಕಾರಿಗಳು ಪುನಃ ತಂದೆಯವರ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಿದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನು ಪರಿಗಣಿಸದೇ, 28 ಎಕರೆ ಪೈಕಿ 5 ಎಕರೆಯನ್ನು ವಕ್ಫ್‌ ಬೋರ್ಡ್‌ಗೆ ಹಂಚಿಕೆ ಮಾಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ ನ ನವೆಂಬರ್ 7ರ ತೀರ್ಪಿನ ಅನ್ವಯ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್‌ ವಕ್ಫ್‌ ಬೋರ್ಡ್‌ಗೆ ಐದು ಎಕರೆ ಜಾಗವನ್ನು 2019ರ ನ.7ರಂದು ನೀಡಲಾಯಿತು. ಈ ನಿವೇಶನದಲ್ಲಿ ಮಸೀದಿ ನಿರ್ಮಾಣಕ್ಕೆ ಜ. 26ರಂದು ಶಿಲಾನ್ಯಾಸ ನೆರವೇರಿಸಲಾಗಿದೆ. ಇದೀಗ ಈ ಜಾಗದ ವಿವಾದದಿಂದಾಗಿ ಮತ್ತೆ ಮಸೀದಿ ನಿರ್ಮಾಣ ಕಾರ್ಯ ಸುದ್ದಿಗೆ ಗ್ರಾಸವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *