ನೂರಾರು ಸವಾಲುಗಳನ್ನು ಜಯಸಿದ್ದೇನೆ; ಉಪ ಚುನಾವಣೆಯಲ್ಲಿ ಗೆದ್ದು ತೋರಿಸಿ: ಕಾಂಗ್ರೆಸ್ ಗೆ ಸಿಎಂ ಯಡಿಯೂರಪ್ಪ ಚಾಲೆಂಜ್
ಬೆಂಗಳೂರು: ನಾನು ಈಗಾಗಲೇ ಹಲವು ಸವಾಲಗಳನ್ನು ಜಯಸಿದ್ದೇನೆ, ಸಾಧ್ಯವಾದರೇ ಮುಂಬರುವ ಉಪ ಚುನಾವಣೆಗಳನ್ನು ನೀವು ಗೆದ್ದು ತೋರಿಸಿ ಎಂದು ಸಿಎಂ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಹತ್ತು ಹಲವು ರೀತಿಯ ಸವಾಲು ಎದುರಿಸಿ ಗೆಲುವು ಸಾಧಿಸಿದ್ದೇನೆ. ಅಧಿಕಾರದ ಅವಧಿಯಲ್ಲಿ ದ್ವೇಷದ ರಾಜಕೀಯ ಮಾಡಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ, 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 2020ರಲ್ಲಿ ನಮ್ಮ ಪಕ್ಷ ಶಿರಾ ಸೇರಿದಂತೆ ಹಲವು ಚುನಾವಣೆಯಲ್ಲಿ ಜಯ ಸಾಧಿಸಿದ್ದೇವೆ ಎಂದು ಹೇಳಿದ್ದಾರೆ.
ಮಸ್ಕಿ, ಸಿಂಧಗಿ, ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾವು ನಾಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಸಿಎಂ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಆದರೆ ನಿಮ್ಮ ನಾಯಕತ್ವದಲ್ಲಿ (ಸಿದ್ದರಾಮಯ್ಯ) ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ, ಹಿಂದೆಂದೂ ಇಂತಹ ಸ್ಥಿತಿ ಬಂದಿರಲಿಲ್ಲ. ಏಕೆಂದರೆ ಜನರಿಗೆ ಕಾಂಗ್ರೆಸ್ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ನಾನು ನೂರಾರು ಸವಾಲುಗಳನ್ನು ಎದುರಿಸಿದ್ದೇನೆ ಮತ್ತು ಗೆದ್ದಿದ್ದೇನೆ, ನನ್ನ ಧೈರ್ಯ, ಬದ್ಧತೆ ಹಾಗೂ ತಾಳ್ಮೆ ನನ್ನನ್ನು ಇಂದು ಇಲ್ಲಿಗೆ ತಂದು ಕೂರಿಸಿದೆ. ಅಧಿಕಾರ ಇರುವುದು ಜನರಿಗೆ ಸಹಾಯ ಮಾಡಲು ಆದರೆ ಕೆಲವರಿಗೆ ಇದು ದ್ವೇಷದ ಸಾಧನವಾಗಿದೆ ಎಂದು ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.