ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ವಿದ್ಯುಕ್ತ ತೆರೆ: ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾದ ರಾಷ್ಟ್ರಪತಿ
ಬೆಂಗಳೂರು: ಕಳೆದ 3 ದಿನಗಳಿಂದ ಬಾನಂಗಳದಲ್ಲಿ ಚಮತ್ಕಾರ ಮೆರೆದಿದ್ದ ಲೋಹದ ಹಕ್ಕಿಗಳ ನರ್ತನ ಏರೋ ಇಂಡಿಯಾ-೨೦೨೧ ವೈಮಾನಿಕ ಪ್ರದರ್ಶನಕ್ಕೆ ವಿದ್ಯುಕ್ತವಾಗಿ ಕೊನೆಗೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ದೇಶ, ರಕ್ಷಣಾ ಹಾಗೂ ವೈಮಾನಿಕ ವಲಯದಲ್ಲಿ ಸಶಕ್ತವಾಗುತ್ತಿದೆ. ಇದಕ್ಕೆ ಏರೋ ಇಂಡಿಯಾ ಸಾಕ್ಷಿಯಾಗಿದೆ ಎಂದರು.
ಕೇಂದ್ರ ಸರ್ಕಾರ ರಕ್ಷಣಾ ಕ್ಷೇತ್ರದ ಬೆಳವಣಿಗೆಗೆ ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ದೇಶದಲ್ಲಿ ಕಳೆದ ಆರು ವರುಷಗಳಲ್ಲಿ ಜಾರಿಗೆ ತಂದ ಸುಧಾರಣೆಗಳಿಂದಾಗಿ ರಕ್ಷಣಾ ಮತ್ತು ವೈಮಾನಿಕ ವಲಯಗಳಲ್ಲಿ ಹೂಡಿಕೆದಾರರು ಹಾಗೂ ಖಾಸಗಿ ಕಂಪನಿಗಳಿಗೆ ವಿಪುಲ ಅವಕಾಶಗಳು ದೊರಕಿವೆ. ದೇಶವನ್ನು ರಕ್ಷಣಾ ವಲಯದಲ್ಲಿ ಸ್ವಾವಲಂಬಿಯನ್ನಾಗಿಸಲು ಹಾಗೂ ರಫ್ತನ್ನು ಉತ್ತೇಜಿಸಿ ಮುಂಚೂಣಿ ರಾಷ್ಟ್ರವನ್ನಾಗಿಸಲು ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಭಾರತೀಯ ವಾಯುಪಡೆಯಿಂದ ಎಚ್ಎಎಲ್ಗೆ ೮೩ ತೇಜಸ್ ಹೆಲಿಕಾಪ್ಟರ್ಗಳ ತಯಾರಿಕಾ ಆದೇಶ ದೊರಕಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದರಿಂದ ರಕ್ಷಣಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಏರೋ ಇಂಡಿಯಾದ ೧೩ನೇ ಆವೃತ್ತಿಯಲ್ಲಿ ೧೨೧ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. ೧೨ ತಂತ್ರಜ್ಞಾನದ ವರ್ಗಾವಣೆ, ನಾಲ್ಕು ಹೊಸ ರಕ್ಷಣಾ ಪರಿಕರಗಳ ಹಸ್ತಾಂತರ, ೩೨ ಪ್ರಮುಖ ಘೋಷಣೆಗಳು ಹಾಗೂ ೧೮ ನೂತನ ಉತ್ಪನ್ನಗಳ ಅನಾವರಣವನ್ನು ಏರೋ ಇಂಡಿಯಾದ ಈ ಆವೃತ್ತಿಯಲ್ಲಿ ನಡೆಸಲಾಯಿತು ಎಂದರು. ಹಿಂದು ಮಹಾಸಾಗರ ಪ್ರದೇಶದ ರಕ್ಷಣಾ ಸಚಿವರುಗಳ ಸಮಾವೇಶದಲ್ಲಿ ೨೮ ದೇಶಗಳು ಭಾಗಿಯಾಗಿರುವುದು, ಈ ಪ್ರದೇಶದಲ್ಲಿ ಶಾಂತಿ ಹಾಗೂ ಭದ್ರತೆ ಕಾಪಾಡುವಲ್ಲಿ ಸಹಾಯಕಾರಿಯಾಗಲಿದೆ ಎಂದರು.
ರಕ್ಷಣಾ ವಲಯದ ಸ್ವಾವಲಂಬನೆಯ ಭರವಸೆ ವ್ಯಕ್ತಪಡಿಸಿದ ರಾಷ್ಟ್ರಪತಿ ಕೋವಿಂದ್
ಯಲಹಂಕ ವಾಯುನೆಲೆಯಲ್ಲಿ ಕಳೆದ ಮೂರು ದಿನಗಳ 13ನೇ ವೈಮಾನಿಕ ಪ್ರದರ್ಶನ ಜಾಗತಿಕ ಮಟ್ಟದಲ್ಲಿ ಶೀಘ್ರ ಬೆಳೆಯುತ್ತಿರುವ ಭಾರತದ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯಕ್ಕೆ ಜೀವಂತ ಉದಾಹರಣೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದರು.
ಈ ಕಾರ್ಯಕ್ರಮ ರಕ್ಷಣಾ ವಲಯದಲ್ಲಿ ದೇಶದ ಸ್ವಾವಲಂಬನೆಯನ್ನು ಬಲಗೊಳಿಸುವ ಹಾಗೂ ವಿಶ್ವದಲ್ಲಿ ಭಾರತದ ಉತ್ಪಾದನೆಗಳನ್ನು ಪ್ರಚುರಪಡಿಸಲು ಕೊಡುಗೆ ನೀಡಿದೆ. ಜೊತೆಗೆ, ಇದು ದೇಶದ ಸಾಮರ್ಥ್ಯ ದ ಮೇಲೆ ಹೆಚ್ಚುತ್ತಿರುವ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸಿದೆ ಎಂದರು.
ಕೋವಿಡ್ -19 ತಂದಿರುವ ಸವಾಲುಗಳ ನಡುಬೆಯೇ, ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಯಶಸ್ವಿಯಾಗಿ ವೈಮಾನಿಕ ಪ್ರದರ್ಶನ ನಡೆಸಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.