ಎಚ್.ಡಿ. ಕುಮಾರಸ್ವಾಮಿಗೆ ಆತಿಥ್ಯ: ಬಿಜೆಪಿ ಮುಖಂಡನಿಗೆ ಪಕ್ಷದಿಂದ ಗೇಟ್ ಪಾಸ್!
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಆತಿಥ್ಯ ನೀಡಿ ಸತ್ಕರಿಸಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಬಿಜೆಪಿ ಮುಖಂಡನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಭೋಜನ ಆತಿಥ್ಯ ನೀಡಿದ್ದ ಸಂತೋಷ್ ಹೊಕ್ರಾಣಿ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷ ಉಚ್ಛಾಟಿಸಿ ಆದೇಶ ಹೊರಡಿಸಲಾಗಿದೆ ಎಂದು ಬಾಗಲಕೋಟೆ ನಾಗರಮ ಮಂಡಲ ಬಿಜೆಪಿ ಅಧ್ಯಕ್ಷ ಬಸವರಾಜ್ ಎಸ್ ಎ ತಿಳಿಸಿದ್ದಾರೆ.
ಸಂತೋಷ್ ಹೊಕ್ರಾಣಿ ಅವರನ್ನು ಪಕ್ಷದಿಂದ ಹೊರಹಾಕಿರುವುದಕ್ಕೆ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂತೋಷ್ ಹೊಕ್ರಾಣಿಬಾಗಲಕೋಟೆ ಮತಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಚುನಾವಣೆ ಗೆಲುವಿನ ಬಳಿಕ ಶಾಸಕ ವೀರಣ್ಣ ಚರಂತಿಮಠ ಹಾಗೂ ಸಂತೋಷ್ ಹೊಕ್ರಾಣಿ ಮಧ್ಯೆ ಮುನಿಸು ಉಂಟಾಗಿತ್ತು, ಈ ಕಾರಣದಿಂದಾಗಿ ಸಂತೋಷ್ ಅವರನ್ನು ಉಚ್ಛಾಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂತೋಷ್ ಹೊಕ್ರಾಣಿ ಬಹಿರಂಗವಾಗಿ ಅಸಮಾಧಾನ ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಂಡಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಜೊತೆಗೆ ಅಂತರ ಕಾಯ್ದುಕೊಂಡು ದೂರವೇ ಉಳಿದಿದ್ದಾರೆ.
ನಾನು ಮತ್ತು ಬಾಗಲಕೋಟೆ ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮಾವಿನಮರದ್ ಸ್ನೇಹಿತರು, ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮದ ನಂತರ ಕುಮಾರಸ್ವಾಮಿ ನನ್ನ ಮನೆಗೆ ಭೇಟಿ ನೀಡಬೇಕೆಂದು ಅವರು ಕೇಳಿದಾಗ ನಾನು ಹೇಗೆ ನಿರಾಕರಿಸಲಿ? ಕುಮಾರಸ್ವಾಮಿ ಅವರು ನನಗೆ ಪಕ್ಷದ ಸದಸ್ಯತ್ವಕ್ಕೆ ಆಹ್ವಾನಿಸಿದ್ದಾರೆ. ನಾನು ಕಳೆದ 18 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸಂತೋಷ್ ಹೊಕ್ರಾಣಿ ತಿಳಿಸಿದ್ದಾರೆ.
ಇದರ ಹಿಂದೆ ಯಾರ ಕೈವಾಡವಿದೆ ಎಂದು ನನಗೆ ತಿಳಿದಿದೆ. ಬಾಗಲಕೋಟೆ ಪಟ್ಟಣಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆಯನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೀಡಬೇಕಾಗಿತ್ತು, ಎರಡನೇ ಹಂತದ ನಾಯಕರ ಬೆಳವಣಿಗೆಗೆ ಆದ್ಯತೆ ನೀಡಬೇಕಾಗಿತ್ತು ಹೊಕ್ರಾಣಿ ಹೇಳಿದ್ದಾರೆ.
ನಾಗರ ಮಂಡಲ್ ಅಧ್ಯಕ್ಷರು ನನ್ನ ಸೂಚನೆಯ ಮೇರೆಗೆ ನಿರ್ಧಾರ ತೆಗೆದುಕೊಂಡಿದ್ದಾರೆಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಹೇಳಿದ್ದಾರೆ.
ಈಚೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಂತೋಷ ಹೊಕ್ರಾಣಿ ಮನೆಗೆ ಭೇಟಿ ನೀಡಿ,ಭೋಜನ ಸವಿದಿದ್ದಾರೆ.ಈ ವೇಳೆ ಸಂತೋಷ್ ಹೊಕ್ರಾಣಿ ಜೆಡಿಎಸ್ ಪಕ್ಷ ಸೇರ್ಪಡೆಗೆ ಆಹ್ವಾನಿಸಿದ್ದಾರೆ.ಆದರೆ ಸಂತೋಷ್ ಹೊಕ್ರಾಣಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಇದೊಂದು ಸೌಹಾರ್ದ ಭೇಟಿಯಾಗಿತ್ತು ಎನ್ನಲಾಗಿದೆ.