ಮೃಗಾಲಯಕ್ಕೆ ರುಚಿಸದ ಗೋ ಕಾಯಿದೆ; ಮಾಂಸಾಹಾರಿ ಪ್ರಾಣಿಗಳಿಗೆ ಚಿಕನ್ ಅಪಥ್ಯ!

ಹೈಲೈಟ್ಸ್‌:

  • ಗೋ ಹತ್ಯಾ ನಿಷೇಧ ಕಾನೂನು ತಂದಿಟ್ಟ ಸಂಕಟ
  • ಮೃಗಾಲಯಕ್ಕೆ ಗೋ ಕಾಯಿದೆ ಕಹಿ
  • ಗೋ ಮಾಂಸ ಪೂರೈಸಲು ರಿಯಾಯಿತಿ ಬಯಸಿದ ಮೃಗಾಲಯ ಪ್ರಾಧಿಕಾರ
  • 10 ಕೆ.ಜಿ. ಬೀಫ್‌ ತಿನ್ನುತ್ತಿದ್ದ ಪ್ರಾಣಿಗಳು ಕೇವಲ 5 ಕೆ.ಜಿ ಯಷ್ಟು ಚಿಕನ್‌ ತಿನ್ನುತ್ತಿವೆ!
  • ಅರೆಹೊಟ್ಟೆಯಲ್ಲೇ ಮಲಗುತ್ತಿವೆ ಪ್ರಾಣಿಗಳು
  • ಆರೋಗ್ಯದ ಮೇಲೆಯೂ ಪರಿಣಾಮ

ಬೆಂಗಳೂರು: ಮೃಗಾಲಯಗಳಿಗೆ ಗೋ ಹತ್ಯಾ ನಿಷೇಧ ಕಾಯಿದೆಯಿಂದ ವಿನಾಯಿತಿ ನೀಡಿ ಗೋ ಮಾಂಸ ಪೂರೈಸಲು ಅವಕಾಶ ನೀಡಿ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರವು ಸರ್ಕಾರಕ್ಕೆ ಮನವಿ ಮಾಡಿದೆ.

ಕಾಯಿದೆ ಹಿನ್ನೆಲೆಯಲ್ಲಿ ಮೃಗಾಲಯದ ಹಲವು ಪ್ರಾಣಿಗಳಿಗೆ ಗೋ ಮಾಂಸದ ಬದಲು ಕೋಳಿ ಮಾಂಸವನ್ನು ಪೂರೈಸಲಾಗುತ್ತಿದೆ. ಆದರೆ ಈ ಆಹಾರ ಪದ್ಧತಿಗೆ ಪ್ರಾಣಿಗಳು ಹೊಂದಿಕೊಳ್ಳದ ಹಿನ್ನೆಲೆಯಲ್ಲಿ ಮೃಗಾಲಯಗಳಿಗೆ ಮಾತ್ರ ಗೋಮಾಂಸ ಪೂರೈಸಲು ಗೋಮಾಂಸ ನಿಷೇಧ ಕಾಯಿದೆಯಿಂದ ರಿಯಾಯಿತಿ ಸಾಧ್ಯವೇ ಎಂಬುದನ್ನು ಸರಕಾರ ಪರಿಶೀಲಿಸಬೇಕಿದೆ. ದೀರ್ಘಕಾಲ ಕೋಳಿಮಾಂಸ ನೀಡಿದರೆ ಪ್ರಾಣಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಪ್ರಾಧಿಕಾರ ಮುಂದಿಟ್ಟಿದೆ.

ಈ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ”ಇತ್ತೀಚೆಗೆ ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆ ಮನವಿ ಮುಂದಿಟ್ಟಿದ್ದೇವೆ,” ಎಂದು ತಿಳಿಸಿದರು.

ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿದ್ದರ ನೇರ ಪರಿಣಾಮ ಮೃಗಾಲಯದ ಪ್ರಾಣಿಗಳ ಮೇಲಾಗುತ್ತಿದೆ. ಕೋಳಿ ಮಾಂಸಕ್ಕೆ ಹೊಂದಿಕೊಳ್ಳದೆ ಪ್ರಾಣಿಗಳು ಪರದಾಡುತ್ತಿವೆ. ನೂತನ ಆಹಾರ ಪದ್ಧತಿಯನ್ನು ರೂಢಿ ಮಾಡಲು ವೈದ್ಯರು ಹರಸಾಹಸ ಪಡುತ್ತಿದ್ದು, 24 ಗಂಟೆಯೂ ತೀವ್ರ ನಿಗಾ ವಹಿಸಲಾಗುತ್ತಿದೆ.

ಮೈಸೂರು, ಬನ್ನೇರುಘಟ್ಟ, ಬೆಳಗಾವಿ ಸೇರಿದಂತೆ ರಾಜ್ಯದ 9 ಮೃಗಾಲಯಗಳಲ್ಲಿನ ಹುಲಿ, ಚಿರತೆ, ಸಿಂಹ ಸೇರಿದಂತೆ ಮಾಂಸಾಹಾರಿ ಪ್ರಾಣಿಗಳಿಗೆ ನಿತ್ಯ 1300 ಕೆ.ಜಿ. ಗೋಮಾಂಸ (ಬೀಫ್‌) ಬರುತ್ತಿತ್ತು. ಕೆಲವು ಪ್ರಾಣಿಗಳು ದಿನಕ್ಕೆ 10 ಕೆ.ಜಿ. ತಿಂದು ದಷ್ಟಪುಷ್ಟವಾಗಿ ಹಾಗೂ ಹುರುಪಿನಿಂದ ಇದ್ದವು. ಆದರೆ, ಗೋಹತ್ಯಾ ನಿಷೇಧ ಕಾಯಿದೆ ಜಾರಿಯಾದ ನಂತರ ಮೃಗಾಲಯದ ಪ್ರಾಣಿಗಳಿಗೆ ಬೀಫ್‌ ಲಭ್ಯವಾಗುತ್ತಿಲ್ಲ. ಇದರ ಬದಲಿಗೆ ಕೋಳಿಮಾಂಸವನ್ನು ನೀಡುತ್ತಿದ್ದರೂ ಅವು ಇಷ್ಟ ಪಡುತ್ತಿಲ್ಲ. 10 ಕೆ.ಜಿ. ಬೀಫ್‌ ತಿನ್ನುತ್ತಿದ್ದ ಪ್ರಾಣಿಗಳು ಕೇವಲ 5 ಕೆ.ಜಿ ಯಷ್ಟು ಚಿಕನ್‌ ಮಾತ್ರ ಸೇವಿಸುತ್ತಿವೆ.

ತಜ್ಞರಿಂದ ತೀವ್ರ ನಿಗಾ
”ಪ್ರಾಣಿಗಳ ಆಹಾರ ಕ್ರಮ ದಿಢೀರ್‌ ಬದಲಾದ ಹಿನ್ನೆಲೆಯಲ್ಲಿ ಅವುಗಳ ಆರೋಗ್ಯದ ಮೇಲೆಯೂ ಪರಿಣಾಮ ಬೀರುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ತಜ್ಞ ವೈದ್ಯರು ದಿನ ಪೂರ್ತಿ ಪಾಳಿ ಪ್ರಕಾರ ಕೋಳಿ ಮಾಂಸ ತಿನ್ನುತ್ತಿರುವ ಪ್ರಾಣಿಗಳ ಮೇಲೆ ನಿಗಾ ಇಡುತ್ತಿದ್ದಾರೆ. 10 ಕೆ.ಜಿ. ಬೀಫ್‌ಗೆ ಬದಲಾಗಿ ಕೇವಲ 5 ಇಲ್ಲವೇ 6 ಕೆ.ಜಿ ಚಿಕನ್‌ ತಿನ್ನುತ್ತಿವೆ. ಬೀಫ್‌ ಪ್ರಾಣಿಗಳ ಆಹಾರಕ್ಕೆ ಪೂರಕವಾಗಿತ್ತು. ಆದರೆ, ಚಿಕನ್‌ನಲ್ಲಿ ಹೆಚ್ಚು ಕೊಬ್ಬಿನಾಂಶ ಇರುವುದರಿಂದ ಇಷ್ಟಪಡುತ್ತಿಲ್ಲ. ಆದರೂ ಅವುಗಳಿಗೆ ರೂಢಿ ಮಾಡಿಸಲಾಗುತ್ತಿದೆ” ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ತಿಳಿಸಿದರು.

 

ಮಟನ್‌ ಇಷ್ಟ: ಖರೀದಿ ಕಷ್ಟ
ಗೋಮಾಂಸ ಬಿಟ್ಟರೆ ಕುರಿಮಾಂಸವನ್ನು ಪ್ರಾಣಿಗಳು ಹೆಚ್ಚು ಇಷ್ಟಪಡುತ್ತವೆ. ಆದರೆ, ಮೃಗಾಲಯದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ದಿನಕ್ಕೆ 1400ರಿಂದ 1500 ಕೆ.ಜಿ. ಮಟನ್‌ ತರಿಸಲು ಸಾಧ್ಯವಿಲ್ಲ. ಗೋಮಾಂಸಕ್ಕೆ ವಾರ್ಷಿಕ 6 ಕೋಟಿ ರೂ. ಖರ್ಚಾಗುತ್ತಿತ್ತು. ಇದೀಗ ಮಟನ್‌ ತರಿಸಿದಲ್ಲಿ ವಾರ್ಷಿಕ 18ರಿಂದ 20 ಕೋಟಿ ರೂ. ಅಗತ್ಯ. ಮೈಸೂರು ಹಾಗೂ ಬನ್ನೇರುಘಟ್ಟದಲ್ಲಿನ ಆದಾಯದಿಂದ ಇಷ್ಟು ವರ್ಷ ಉಳಿದ 7 ಮೃಗಾಲಯಗಳ ನಿರ್ವಹಣೆ ಮಾಡಲಾಗುತ್ತಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಇದೀಗ ಆದಾಯದ ಮೇಲೆ ಹೊಡೆತ ಬಿದ್ದಿದ್ದು, ಪರಾವಲಂಬಿಯಾಗಿವೆ.

ಗೋಮಾಂಸದ ಬದಲಿಗೆ ಚಿಕನ್‌ಗೆ ಪ್ರಾಣಿಗಳು ಹೊಂದಿಕೊಳ್ಳುವಂತೆ ಮಾಡುತ್ತಿದ್ದೇವೆ. ತಜ್ಞರು ಪ್ರಾಣಿಗಳ ಮೇಲೆ ನಿರಂತರವಾಗಿ ನಿಗಾ ಇರಿಸಿದ್ದಾರೆ. 1400 ಕೆ.ಜಿ. ಗೋಮಾಂಸದ ಬದಲಿಗೆ 900 ಕೆ.ಜಿ ಕೋಳಿ ಮಾಂಸ ತರಿಸುತ್ತಿದ್ದೇವೆ.
ಮಹದೇವಸ್ವಾಮಿ, ಅಧ್ಯಕ್ಷರು, ಮೃಗಾಲಯ ಪ್ರಾಧಿಕಾರ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *