ಬೆಂಗಳೂರು: ಬಾಡಿಗೆ ಹಣ ಕೇಳಿದ ಮನೆ ಮಾಲಕಿಯನ್ನೇ ಕೊಂದ ಬಾಡಿಗೆದಾರರು, ಕೊಲೆಯ ಸೂತ್ರಧಾರಿ ಅಜ್ಜಿ?

ಬೆಂಗಳೂರು: ಬಾಡಿಗೆ ಕೇಳಲು ಬಂದಿದ್ದ ಮನೆ ಮಾಲೀಕಳನ್ನು ಕೊಲೆ ಮಾಡಿ, ಪೆಟ್ರೋಲ್‌ ಹಾಕಿ ಸುಟ್ಟು ಹಾಕಿದ್ದ ಬಾಡಿಗೆದಾರ ಹಾಗೂ ಕೊಲೆಗೆ ನೆರವಾದ ಆಟೊ ಡ್ರೈವರ್‌ ಹಾಗೂ ಪ್ರಕರಣ ಮುಚ್ಚಿಹಾಕಲು ನೆರವಾದ ಬಾಡಿಗೆದಾರನ ಅಜ್ಜಿಯನ್ನು ವಿವಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋರಮಂಗಲ ನಿವಾಸಿ, ನಿವೃತ್ತ ಉಪ ತಹಸೀಲ್ದಾರ್‌ ರಾಜೇಶ್ವರಿ (61) ಕೊಲೆಯಾದ ದುರ್ದೈವಿ. ಬಾಡಿಗೆದಾರ ಅಲಿಂ ಪಾಷಾ, ಕೊಲೆಗೆ ನೆರವಾದ ಜೆರಾನ್‌ ಪಾಷಾ ಮತ್ತು ಅಶ್ರಫುನ್ನೀಸಾ ಎಂಬುವರನ್ನು ಬಂಧಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಉಪ ತಹಸೀಲ್ದಾರಾಗಿದ್ದ ರಾಜೇಶ್ವರಿ ವರ್ಷದ ಹಿಂದೆ ನಿವೃತ್ತರಾಗಿದ್ದರು.

ಕೋರಮಂಗಲದಲ್ಲಿ ಮಗ ಮತ್ತು ಸೊಸೆ ಜತೆ ವಾಸವಿದ್ದರು. ವಿವಿಪುರಂನ ಪಾರ್ವತಿ ಪುರಂನಲ್ಲಿ ಮೂರು ಅಂತಸ್ತಿನ ಮನೆಯನ್ನು ಅಲಿಂ ಪಾಷಾಗೆ ಬಾಡಿಗೆಗೆ ನೀಡಿದ್ದರು. ಏಳು ತಿಂಗಳಿಂದ ಅಲಿಂ ಪಾಷಾ ಮನೆ ಬಾಡಿಗೆ ನೀಡಿರಲಿಲ್ಲ. ಕೋವಿಡ್‌ ಇದ್ದ ಕಾರಣ ನಾಲ್ಕು ತಿಂಗಳ ಬಾಡಿಗೆ ಕೊಟ್ಟರೆ ಸಾಕು ಎಂದು ರಾಜೇಶ್ವರಿ ಹೇಳಿದ್ದರು. ಫೆ. 3ರಂದು ಮಧ್ಯಾಹ್ನ 12 ಗಂಟೆಗೆ ಬಾಡಿಗೆ ವಸೂಲಿ ಮಾಡಿಕೊಂಡು ಬರುವುದಾಗಿ ಮನೆಯಲ್ಲಿಹೇಳಿ ಅಲಿಂ ಪಾಷಾ ಇದ್ದ ಮನೆಗೆ ಬಂದಿದ್ದರು.

ಬಾಡಿಗೆ ನೀಡಲಾಗದಿದ್ದರೆ ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದರು. ಇದರಿಂದ ಕೋಪಗೊಂಡ ಅಲಿಂ ಪಾಷಾ ಕತ್ತಿಯನ್ನು ರಾಜೇಶ್ವರಿ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ವಿವಿಪುರಂ ಇನ್‌ಸ್ಪೆಕ್ಟರ್‌ ಮಿರ್ಜಾ ಅಲಿ ರಾಜಾ ವಿವರಿಸಿದರು.

ಆಟೊದಲ್ಲಿ ಶವ ಸಾಗಾಟ!
ಕೋಪದಲ್ಲಿ ಕೊಲೆ ಮಾಡಿದ ಅಲಿಂ, ಭಯಗೊಂಡು ತನ್ನ ಅಜ್ಜಿ ಅಶ್ರಫುನ್ನೀಸಾಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಪೊಲೀಸರಿಗೆ ಶರಣಾಗುವುದಾಗಿಯೂ ಹೇಳಿದ್ದ. ಆದರೆ, ಅಶ್ರಫುನ್ನೀಸಾ ಪ್ರಕರಣ ಮುಚ್ಚಿ ಹಾಕಲು ಸೂಚಿಸಿದ್ದಳು. ಪರಿಚಯಸ್ಥನಾದ ಜೆರಾನ್‌ ಪಾಷಾ ಎಂಬಾತನನ್ನು ಕರೆದುಕೊಂಡು ಆಟೊದಲ್ಲಿ ಬಂದಿದ್ದಳು. ಶವವನ್ನು ಚೀಲಕ್ಕೆ ತುಂಬಿ ಆಟೊದಲ್ಲಿ ಹಾಕಿಕೊಂಡು ಹೋಗಿ ಸುಟ್ಟುಹಾಕುವ ಐಡಿಯಾ ಕೊಟ್ಟಿದ್ದಳು.

ಅದರಂತೆ ಆರೋಪಿಗಳು ಶವ ತೆಗೆದುಕೊಂಡು ಮೈಸೂರು ರಸ್ತೆಯ ಅಂಚೆ ಪಾಳ್ಯದ ಮುಂದೆ ಜಗತ್‌ ಫಾರ್ಮಾ ಬಳಿ ಮೋರಿ ಹತ್ತಿರ ರಸ್ತೆಯ ಬಳಿಯೇ ಮಧ್ಯಾಹ್ನದ ವೇಳೆಯಲ್ಲೇ ಖಾಲಿ ಜಾಗದಲ್ಲಿ ಶವಕ್ಕೆ ಪೆಟ್ರೋಲ್‌ ಹಾಕಿ ಸುಟ್ಟು ಹಾಕಿದ್ದಾರೆ. ಶವ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿರಾಜೇಶ್ವರಿ ಅವರ ಮೊಬೈಲ್‌ ಬಿಸಾಡಿದ್ದರು. ಇದರಿಂದಲೇ ಕೊಲೆ ಸುಳಿವು ದೊರೆಯಿತು ಎಂದು ಅಧಿಕಾರಿ ತಿಳಿಸಿದರು.

ರಸ್ತೆಯಲ್ಲೇ ಮೊಬೈಲ್‌ ಬಿಸಾಡಿದ್ದ ಆರೋಪಿಗಳು!
ಬಾಡಿಗೆ ವಸೂಲಿಗೆ ಹೋಗಿದ್ದ ತಾಯಿ ವಾಪಸು ಬಂದಿಲ್ಲಎಂದು ರಾಜೇಶ್ವರಿ ಅವರ ಪುತ್ರ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಬಾಡಿಗೆದಾರ ಅಲಿಂ ಪಾಷಾನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಬಾಡಿಗೆ ಹಣ ಪಡೆದುಕೊಂಡು ಹೋಗಿದ್ದಾರೆ ಎಂದು ಆತ ಹೇಳಿದ್ದ. ರಾಜೇಶ್ವರಿ ಅವರು ಬಳಸುತ್ತಿದ್ದ ಮೊಬೈಲ್‌ಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ಫೋನ್‌ ಸ್ವೀಕರಿಸಿದ್ದ. ಆತನನ್ನು ವಿಚಾರಿಸಿದಾಗ ರಸ್ತೆ ಪಕ್ಕ ಮೊಬೈಲ್‌ ಸಿಕ್ಕಿದೆ ಎಂದು ಹೇಳಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು, ಅಲಿಂಪಾಷಾನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಾಯಿ ಬಿಟ್ಟಿದ್ದಾನೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *