ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ನಗದು ಬಹುಮಾನ! ಮಂಗಳೂರಿನ ಕಾಂಗ್ರೆಸ್ ನಾಯಕಿಯ ಆಫರ್
ಹೈಲೈಟ್ಸ್:
- ಕೋಟಿ- ಚೆನ್ನಯ್ಯ ಕುರಿತಾಗಿ ಅವಹೇಳಕಾರಿ ಹೇಳಿಕೆ ಆರೋಪ
- ಬಿಜೆಪಿ ಮುಖಂಡರೊಬ್ಬರ ಮುಖಕ್ಕೆ ಮಸಿ ಬಳಿದರೆ ಒಂದು ಲಕ್ಷ ಆಫರ್
- ಮಂಗಳೂರಿನ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಂದ ಆಫರ್
ಮಂಗಳೂರು: ತುಳುನಾಡಿದ ಆರಾಧ್ಯ ದೈವ ಕೋಟಿ-ಚೆನ್ನಯ್ಯಗೆ ಅವಮಾನ ಮಾಡಿರುವ ಬಿಜೆಪಿ ಮುಖಂಡರೊಬ್ಬರ ಮುಖಕ್ಕೆ ಮಸಿ ಬಳಿದರೆ ಒಂದು ಲಕ್ಷ ನಗದು ಬಹುಮಾನದ ಆಫರ್‌ವೊಂದನ್ನು ಮಂಗಳೂರಿನ ಕಾಂಗ್ರೆಸ್ ನಾಯಕಿಯೊಬ್ಬರು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಎಂಬುವವರು ತುಳುನಾಡಿದ ಆರಾಧ್ಯ ದೈವ ಕೋಟಿ-ಚೆನ್ನಯ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಆಫರ್ ನೀಡಲಾಗಿದೆ. ಇತ್ತೀಚೆಗೆ ಜಗದೀಶ್ ಅಧಿಕಾರಿ ಭಾಷಣವೊಂದರಲ್ಲಿ ಕಾಂಗ್ರೆಸ್ ನಾಯಕ ಜನಾರ್ಧನ್ ಪೂಜಾರಿ ಕುರಿತಾಗಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು.
ಇದಾದ ಬಳಿಕ ಜನಾರ್ಧನ್ ಪೂಜಾರಿ ಅವರ ಬೆಂಬಲಿಗರೊಬ್ಬರು ಫೋನ್ ಮಾಡಿ ಜಗದೀಶ್ ಅಧಿಕಾರಿ ಜೊತೆಗೆ ಮಾತನಾಡಿದ್ದರು. ಈ ವೇಳೆ ಅವರು ಜನಾರ್ಧನ್ ಪೂಜಾರಿ ಹಾಗೂ ಕೋಟಿ-ಚೆನ್ನಯ್ಯ ಕುರಿತಾಗಿ ಅವಹೇಳನಕಾರಿಯಾಗಿ ಮಾಡನಾಡಿದ್ದ ಆಡಿಯೋ ವೈರಲ್ ಆಗಿತ್ತು.
ಜಗದೀಶ್ ಅಧಿಕಾರಿಯ ಈ ವರ್ತನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಬಿಲ್ಲವ ಸಮುದಾಯದ ಮುಖಂಡರಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಮಂಗಳೂರಿನ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಒಂದನ್ನು ಹರಿಯಬಿಟ್ಟಿದ್ದಾರೆ. ವಿಡಿಯೋದಲ್ಲಿ ಜಗದೀಶ್ ಅಧಿಕಾರಿಯ ವಿರುದ್ಧ ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲದೆ ಕೋಟಿ-ಚೆನ್ನಯ್ಯಗೆ ಅವಮಾನ ಮಾಡಿದ ಜಗದೀಶ್ ಅಧಿಕಾರಿ ಮೂರು ದಿನಗಳ ಒಳಗಾಗಿ ಗರೋಡಿ ಕ್ಷೇತ್ರಕ್ಕೆ ತೆರಳಿ ಕ್ಷಮೆಯಾಚನೆ ಮಾಡಬೇಕು. ಒಂದು ವೇಳೆ ಕ್ಷಮೆಯಾಚನೆ ಮಾಡದೇ ಇದ್ದಲ್ಲಿ ಅವರ ಮುಖಕ್ಕೆ ಮೊದಲು ಮಸಿ ಬಳಿದ ಬಿಲ್ಲವ ಯುವಕರಿಗೆ ಒಂದು ಲಕ್ಷ ನಗದು ಬಹುಮಾನ ನೀಡುವ ಆಫರ್ ಒಂದನ್ನು ನೀಡಿದ್ದಾರೆ.
ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ನೀಡಿರುವ ಈ ಆಫರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಹಿಂದೂ ದೇವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದಲ್ಲಿ ವಿಚಾರವಾಗಿ ಫ್ರೊ. ಭಗವಾನ್ ಅವರ ಮುಖಕ್ಕೆ ನ್ಯಾಯಾಲಯದ ಆವರಣದಲ್ಲಿ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದಿದ್ದರು.