ದೆಹಲಿಯ ಕೆಂಪುಕೋಟೆ ಮೇಲೆ ದಾಂಧಲೆ: ಮುಖ್ಯ ಆರೋಪಿ ನಟ ದೀಪ್ ಸಿಧು ಬಂಧನ
ನವದೆಹಲಿ: ದೆಹಲಿಯ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ರೈತರು ಹಿಂಸಾಚಾರ ನಡೆಸಲು ಪ್ರೇರಣೆ ನೀಡಿದ್ದ ಆರೋಪ ಎದುರಿಸುತ್ತಿದ್ದ ನಟ ದೀಪ್ ಸಿಧುವನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಕೆಂಪು ಕೋಟೆ ಮೇಲೆ ಏರಿ ಸಿಖ್ ಧ್ವಜ ಹಾರಿಸಿ ಗಲಭೆಯೆಬ್ಬಿಸುವಂತೆ ರೈತರನ್ನು ಪ್ರೇರೇಪಿಸಿದ್ದ ಎಂಬ ಆರೋಪ ದೀಪ್ ಸಿಧು ಮೇಲೆ ಕೇಳಿಬಂದಿತ್ತು. ಆ ದಿನ ಕೆಂಪು ಕೋಟೆ ಬಳಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಹಲವರಿಗೆ ಗಾಯಗಳಾಗಿದ್ದಲ್ಲದೆ ಸಾಕಷ್ಟು ಆಸ್ತಿಪಾಸ್ತಿಗಳು ಹಾನಿಗೀಡಾಗಿದ್ದವು.
ಬಳಿಕ ಪಂಜಾಬಿ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದ. ದೆಹಲಿ ಪೊಲೀಸರು ಈತನ ಪತ್ತೆಗಾಗಿ ಲುಕ್ ಔಟ್ ನೊಟೀಸ್ ಹೊರಡಿಸಿದ್ದರು.ಇದೀಗ 14 ದಿನಗಳ ಬಳಿಕ ಬಂಧಿಸಿದ್ದಾರೆ.
ದೀಪ್ ಸಿಧು ಬಿಜೆಪಿ ಪರ ಎಂಬ ಮಾತುಗಳು ಕೇಳಿಬಂದವು. ಈತ ಪ್ರಧಾನಿ ಮೋದಿಯವರೊಂದಿಗೆ ನಿಂತುಕೊಂಡಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸಂಸದ ನಟ ಸನ್ನಿ ಡಿಯೋಲ್ ಪರ ಪ್ರಚಾರದ ಮ್ಯಾನೇಜರ್ ಆಗಿದ್ದ.