ಮಸ್ಕಿ ಉಪಚುನಾವಣೆ: ಕಾಂಗ್ರೆಸ್​-ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ: ಜೆಡಿಎಸ್ ಎಲೆಕ್ಷನ್​ನಿಂದ​​ ದೂರ ಉಳಿಯುವ ಸಾಧ್ಯತೆ

ರಾಯಚೂರು(ಫೆ.09): ಪ್ರತಾಪಗೌಡ ಪಾಟೀಲರ ರಾಜೀನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇಷ್ಟರಲ್ಲಿ ನಡೆಯುವ ಸಾಧ್ಯತೆ ಇದೆ. ಉಪಚುನಾವಣೆ ದಿನಾಂಕ ಘೋಷಣೆಯಾಗಿಲ್ಲ, ಆಗಲೇ ಬಿಜೆಪಿ, ಕಾಂಗ್ರೆಸ್ ಉಪಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಭರದ ಸಿದ್ದತೆ ಮಾಡಿಕೊಂಡಿವೆ. ಆದರೆ ಕರ್ನಾಟಕ ಮಟ್ಟದಲ್ಲಿ ಇನ್ನೊಂದು ಪ್ರಬಲ ಪಕ್ಷಗಳಲ್ಲೊಂದಾದ ಜೆಡಿಎಸ್ ನಲ್ಲಿ ಈ ಚುನಾವಣೆಗೆ ಸ್ಪರ್ಧಿಸುವ ಸಿದ್ದತೆ ಕಾಣುತ್ತಿಲ್ಲ.

2018ರಲ್ಲಿ ಕಾಂಗ್ರೆಸ್ಸಿನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಪ್ರತಾಪಗೌಡ ಪಾಟೀಲ 2019ರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು ಆಗ 17 ಜನ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ರಾಜೀನಾಮೆಯಿಂದಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬಂದಿದೆ. ಯಡಿಯೂರಪ್ಪ ಸರಕಾರ ಬಂದ ನಂತರ ಉಪಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗೆಲ್ಲುತ್ತಾ ಬಂದಿದೆ. ಇದೇ ವೇಳೆ ಜೆಡಿಎಸ್ ಒಂದೂ ಸ್ಥಾನ ಗೆದ್ದಿಲ್ಲ, ಈ ಹಿನ್ನಲೆಯಲ್ಲಿ ಮಸ್ಕಿ ಬೈ ಎಲೆಕ್ಷನ್ ಗೆ ಜೆಡಿಎಸ್ ನಿರಾಸಕ್ತಿ ವಹಿಸಿದೆ ಎನ್ನಲಾಗಿದೆ.

2018ರಲ್ಲಿ ಜೆಡಿಎಸ್ ನಿಂದ ರಾಜಾ ಸೋಮನಾಥ ನಾಯಕ ಸ್ಪರ್ಧಿಸಿದ್ದರು. ಅವರು ಅಂಥ ಗಮನಾರ್ಹ ಮತಗಳಿಸಿಲ್ಲ. ಜಿಲ್ಲೆಯಲ್ಲಿ ಸಿಂಧನೂರಿನಲ್ಲಿ ವೆಂಕಟರಾವ್ ನಾಡಗೌಡ, ಮಾನವಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ ಲಿಂಗಸಗೂರಿನಲ್ಲಿ ಸಿದ್ದು ಬಂಡಿ ಉತ್ತಮ ಮತಗಳನ್ನು ಗಳಿಸಿ ಎರಡನೆಯ ಸ್ಥಾನದಲ್ಲಿದ್ದರು. ದೇವದುರ್ಗಾದಲ್ಲಿ ದೇವೇಗೌಡ ಪ್ರಭಾವದಿಂದ ಜೆಡಿಎಸ್ ಬೆಂಬಲಿಗರಿದ್ದಾರೆ.

ನಾರಾಯಣಪುರ ಬಲದಂಡೆ ನಾಲೆ ನಿರ್ಮಿಸಿದ ದೇವೇಗೌಡರಿಗೆ ಜಿಲ್ಲೆಯಲ್ಲಿ ಜನರು ಬೆಂಬಲ ವ್ಯಕ್ತಪಡಿಸುತ್ತಾ ಇದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಜೆಡಿಎಸ್ ತನ್ನ ಪ್ರಭಾವ ಕಳೆದುಕೊಂಡಿದೆ ಎಂದರೂ ಇಲ್ಲಿ ಮೊದಲಿನಿಂದಲೂ ಕನಿಷ್ಠ ಇಬ್ಬರು ಶಾಸಕರು ಆಯ್ಕೆಯಾಗುತ್ತಲೇ ಬಂದಿದ್ದಾರೆ. ಇದಕ್ಕೆ ಉದಾಹರಣೆಯಾಗಿ 2013ರಲ್ಲಿ ರಾಯಚೂರು ನಗರ ಹಾಗೂ ಲಿಂಗಸಗೂರಿನಲ್ಲಿ,  2018 ರಲ್ಲಿ ಸಿಂಧನೂರು ಹಾಗೂ ಮಾನವಿಯಲ್ಲಿ ಜೆಡಿಎಸ್  ಶಾಸಕರು ಆಯ್ಕೆಯಾಗಿದ್ದಾರೆ.

ಮಸ್ಕಿ ಬೈ ಎಲೆಕ್ಷನ್ ಹಿನ್ನಲೆಯಲ್ಲಿ ಬಿಜೆಪಿ ಈಗಾಗಲೇ ಹಲವು ಬಾರಿ ಸಮಾವೇಶ ನಡೆಸಿದೆ. ಜಾತಿವಾರು ಮುಖಂಡರನ್ನು ಕರೆದು ಸಮಾವೇಶ ಮಾಡಿದೆ. ಸರಕಾರದಿಂದ ಅನುದಾನ ಬಿಡುಗಡೆ ಮಾಡಿ ಮತ ಸೆಳೆಯುತ್ತಿದೆ. ಈಗಾಗಲೇ ಚುನಾವಣೆಗೆ ಸಚಿವ ಶ್ರೀರಾಮುಲು ಹಾಗೂ ಬಿ ವೈ ವಿಜಯೇಂದ್ರ ಸೇರಿದಂತೆ ಪ್ರಮುಖರನ್ನು ಉಸ್ತುವಾರಿ ವಹಿಸಿದೆ.

ಇನ್ನೂ ಕಾಂಗ್ರೆಸ್ ನಲ್ಲಿ ಸಹ ಭರ್ಜರಿ ಸಿದ್ದತೆ ನಡೆದಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆಯ ಕಾರ್ಯಕ್ರಮ ವನ್ನು ಅದ್ದೂರಿಯಾಗಿ ಮಾಡಿದೆ. ಅಲ್ಲದೆ ಕ್ಷೇತ್ರದಲ್ಲಿ ಚುನಾವಣೆಗೆ ಬೇಕಾಗುವ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಆದರೆ ಜೆಡಿಎಸ್ ನಲ್ಲಿ ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ.

ಈ ಬಗ್ಗೆ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ರನ್ನು ಕೇಳಿದರೆ ಮಸ್ಕಿಯಲ್ಲಿ ನಾವು ಪ್ರಬಲವಾಗಿಲ್ಲ, ಈ ಹಿನ್ನಲೆಯಲ್ಲಿ ರಾಜ್ಯ ವರಿಷ್ಠರ ನಿರ್ಧಾರಕ್ಕೆ ಕಾಯಿಯುತ್ತಿದ್ದೇವೆ, ಪ್ರಬಲವಾಗಿಲ್ಲದ ಕಡೆ ನಾವು ಸ್ಪರ್ಧಿಸುವ ಕುರಿತು ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಅಭ್ಯರ್ಥಿ ನಿಲ್ಲಿಸಿದರೆ ಕೆಲಸ ಮಾಡುತ್ತೇವೆ. ನಿಲ್ಲಸದಿದ್ದರೆ ವರಿಷ್ಠರು ತಟಸ್ಥರಾಗುವಂತೆಯೋ ಅಥವಾ ಯಾರಿಗೆ ಬೆಂಬಲಿಸಿ ಎನ್ನುತ್ತಾರೊ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಒಟ್ಟಾರೆ ಮಸ್ಕಿ ಬೈ ಎಲೆಕ್ಷನ್ ಗೆ ಜೆಡಿಎಸ್ ದೂರು ಉಳಿಯುವುದು ಬಹುತೇಕ ಖಚಿತವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *