ಘನತ್ಯಾಜ್ಯ ವಿಲೇವಾರಿ ನಿಯಮ ಪಾಲನೆ ವಿಚಾರವಾಗಿ ವಾರದೊಳಗೆ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

ಹೈಲೈಟ್ಸ್‌:

  • 2016ರ ಘನ ತ್ಯಾಜ್ಯ ವಿಲೇವಾರಿ ನಿಯಮ ಪಾಲನೆ ಕುರಿತು ಬಿಬಿಎಂಪಿಗೆ ಹೈಕೋರ್ಟ್ ತರಾಟೆ
  • ನಿಯಮ ಪಾಲನೆ ವಿಚಾರದಲ್ಲಿ ನಿರ್ಲಕ್ಷ್ಯ ಸಹಿಸಲಾಗದು ಎಂದು ಖಡಕ್ ಸೂಚನೆ
  • ಈ ಕುರಿತು ಒಂದು ವಾರದೊಳಗೆ ವರದಿ ಸೂಚಿಸಲು ಪಾಲಿಕೆಗೆ ಸೂಚಿಸಿದ ನ್ಯಾಯಾಲಯ

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಯಲ್ಲಿ 2016ರ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಒಂದು ವಾರದಲ್ಲಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್‌ ಬುಧವಾರ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

2012ರಲ್ಲಿ ಕವಿತಾ ಶಂಕರ್‌ ಮತ್ತಿತರರು ಸಲ್ಲಿಸಿದ್ದ ಪಿಐಎಲ್‌ಗಳು ಸಿಜೆ ಎ.ಎಸ್‌.ಓಕ್‌ ನೇತೃತ್ವದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದವು. ಆಗ ನ್ಯಾಯಪೀಠ, 2016ರ ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ? ಹಾಗಿದ್ದರೆ ಈವರೆಗೆ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ಏನೇನು ಕ್ರಮ ಕೈಗೊಳ್ಳಲಾಗಿದೆ? ಪಾಲಿಕೆ ಸುಮ್ಮನಿರುವುದು ನೋಡಿದರೆ ಏನೂ ಕ್ರಮ ಕೈಗೊಂಡಿಲ್ಲ ಎನಿಸುತ್ತದೆ. ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ, ಇದನ್ನೆಲ್ಲಾ ಸಹಿಸಲಾಗದು ಎಂದು ಸೂಚ್ಯವಾಗಿ ಹೇಳಿತು.

ಅಲ್ಲದೆ, ಮೊದಲು 2016ರ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ವಿವರವಾದ ವರದಿ ಸಲ್ಲಿಸಿ. ಅದನ್ನು ಪರಿಶೀಲಿಸಿ ನಂತರ ನ್ಯಾಯಾಲಯ ಸೂಕ್ತ ಆದೇಶಗಳನ್ನು ನೀಡಲಿದೆ ಎಂದು ಹೇಳಿ ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು. ಬಿಬಿಎಂಪಿ 2016ರ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಏಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅದರ ವಿರುದ್ಧ ಕ್ರಮ ಕೈಗೊಂಡಿಲ್ಲ? ಸ್ಥಳೀಯ ಅಧಿಕಾರಿಗಳು ಏಕೆ ದಂಡನಾ ಕ್ರಮ ಜರುಗಿಲ್ಲ ಎಂದು ಪ್ರಶ್ನಿಸಿದ ನ್ಯಾಯಪೀಠ, ವಿವರ ನೀಡುವಂತೆ ಮಂಡಳಿ ಪರ ವಕೀಲರಿಗೆ ಸೂಚನೆ ನೀಡಿತು.

ಅರ್ಜಿದಾರರ ಪರ ವಕೀಲ ಅಜೇಶ್‌ ಕುಮಾರ್‌, ಬೆಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನ್ಯಾಯಾಲಯ 2012ರಿಂದ ಈವರೆಗೆ ನೀಡಿರುವ ಆದೇಶಗಳನ್ನು ಎರಡು ಸಂಪುಟಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅವುಗಳನ್ನು ಪರಿಶೀಲಿಸಿ ಸೂಕ್ತ ಆದೇಶಗಳನ್ನು ಹೊರಡಿಸಬೇಕು ಎಂದು ಕೋರಿದರು.

ಹೈಕೋರ್ಟ್‌ ಕಳೆದ ವಿಚಾರಣೆ ವೇಳೆ, 2022ರ ವೇಳೆಗೆ ಬೆಂಗಳೂರಿನಲ್ಲಿ ಪ್ರತಿದಿನ ಎಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಏನೇನು ಕ್ರಮಗಳನ್ನು ಕೈಗೊಳ್ಳುವಿರಿ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಪಾಲಿಕೆಗೆ ಸೂಚನೆ ನೀಡಿತ್ತು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *