ಭಾರತ ಸರ್ಕಾರದ ಸೂಚನೆ ಸರಿಯಾಗಿ ಪಾಲಿಸದಿದ್ದರೆ ಟ್ವಿಟ್ಟರ್ನ ಹಿರಿಯ ಅಧಿಕಾರಿಗಳ ಬಂಧನ ಸಾಧ್ಯತೆ
ನವದೆಹಲಿ(ಫೆ. 11): ರಾಷ್ಟ್ರವಿರೋಧಿ ವಿಚಾರಗಳನ್ನ ಹೊರಹಾಕುವ ಟ್ವಿಟ್ಟರ್ ಖಾತೆಗಳನ್ನ ಸ್ಥಗಿತಗೊಳಿಸಬೇಕೆಂದು ಭಾರತ ಸರ್ಕಾರದ ಕೋರಿಕೆಗೆ ಟ್ವಿಟ್ಟರ್ ಇನ್ನೂ ಸಂಪೂರ್ಣವಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ನ ಭಾರತೀಯ ವಿಭಾಗದ ಹಿರಿಯ ಅಧಿಕಾರಿಗಳನ್ನ ಸರ್ಕಾರ ಬಂಧಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಐಟಿ ಕಾಯ್ದೆ ಸೆಕ್ಷನ್ 69ಎ ಅಡಿಯಲ್ಲಿ ಸರ್ಕಾರ ನೀಡಿದ್ದ ಸೂಚನೆಯನ್ನು ಪಾಲಿಸಲು ಟ್ವಿಟ್ಟರ್ ನಿರಾಕರಿಸಿದೆ. ಇದರಿಂದ ತನ್ನ ಸಂಯಮದ ಕಟ್ಟೆ ಒಡೆದುಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸರ್ಕಾರ, ಸ್ಥಳೀಯ ಕಾನೂನುಗಳಿಗೆ ಬೆಲೆ ಕೊಡಬೇಕು ಎಂದು ಟ್ವಿಟ್ಟರ್ ಸಂಸ್ಥೆಗೆ ತಾಕೀತು ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಸರ್ಕಾರ ಹೊರಡಿಸಿದ ಆದೇಶದ ಬಹುತೇಕ ಅಂಶಗಳನ್ನ ಟ್ವಿಟ್ಟರ್ ಬಹಳ ಆಲಸ್ಯ, ನಿರಾಸಕ್ತಿ, ತಿರಸ್ಕಾರದಿಂದ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿ (ಮಾಹಿತಿ ತಂತ್ರಜ್ಞಾನ ಇಲಾಖೆ) ಅವರು ಟ್ವಿಟ್ಟರ್ಗೆ ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಅದರ ಸಂವಿಧಾನ ಮತ್ತು ಕಾನೂನುಗಳೇ ಅಂತಿಮ ಎಂಬುದನ್ನು ಟ್ಟಿಟ್ಟರ್ ಸಂಸ್ಥೆಗೆ ತಿಳಿಸಿಕೊಟ್ಟಿದ್ದಾರೆ. ಜವಾಬ್ದಾರಿಯುತ ಸಂಸ್ಥೆಗಳು ಈ ನೆಲದ ಕಾನೂನಿಗೆ ಬದ್ಧವಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ” ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಈ ಹೇಳಿಕೆ ಬಿಡುಗಡೆ ಮಾಡುವ ಮುನ್ನ ಟ್ವಿಟ್ಟರ್ನ ಗ್ಲೋಬಲ್ ಪಬ್ಲಿಕ್ ಪಾಲಿಸಿ ವೈಸ್ ಪ್ರೆಸಿಡೆಂಟ್ ಮೋನಿಕ್ ಮೆಶೆ ಮತ್ತು ಡೆಪ್ಯೂಟಿ ಜನರಲ್ ಕೌನ್ಸೆಲ್ ಜಿಲ್ ಬಾಕೆರ್ ಅವರ ಜೊತೆ ಐಟಿ ಇಲಾಖೆ ಕಾರ್ಯದರ್ಶಿಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ಮಾಡಿದ್ದರು.
ರೈತ ಪ್ರತಿಭಟನೆಗಳ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನ ಹಬ್ಬಿಸಲಾಗುತ್ತಿದೆ ಎನ್ನಲಾದ 1,100 ಕ್ಕೂ ಹೆಚ್ಚು ಟ್ವಿಟ್ಟರ್ ಖಾತೆಗಳನ್ನ ನಿಷ್ಕ್ರಿಯಗೊಳಿಸುವಂತೆ ಟ್ವಿಟ್ಟರ್ ಸಂಸ್ಥೆಗೆ ಸರ್ಕಾರ ಪಟ್ಟಿ ನೀಡಿತ್ತು. ಇದರಲ್ಲಿ ಸುಮಾರು 500 ಖಾತೆಗಳನ್ನ ಟ್ವಿಟ್ಟರ್ ತೆಗೆದುಹಾಕಿದೆ. ಆದರೆ, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಬೇಕು ಎಂದು ವಾದ ಮುಂದಿಟ್ಟು ಟ್ವಿಟ್ಟರ್ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಲು ಯೋಜಿಸಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಕಾಪಾಡಬೇಕೆಂಬ ನಮ್ಮ ಸಂಸ್ಥೆಯ ತತ್ವ ಇರುವ ಹಿನ್ನೆಲೆಯಲ್ಲಿ ಸರ್ಕಾರ ನೀಡಿದ ಪಟ್ಟಿಯಲ್ಲಿರುವ ಸುದ್ದಿ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳು ಮೊದಲಾದವರ ಟ್ವಿಟ್ಟರ್ ಖಾತೆಗಳ ಮೇಲೆ ನಾವು ಕ್ರಮ ತೆಗೆದುಕೊಂಡಿಲ್ಲ. ಹಾಗೇನಾದರೂ ಮಾಡಿದರೆ ಭಾರತೀಯ ಕಾನೂನಿನಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಟ್ವಿಟ್ಟರ್ ವಾದಿಸುತ್ತಿದೆ.“ಟ್ವಿಟ್ಟರ್ ತನ್ನದೇ ಸ್ವಂತ ನಿಯಮ ಮತ್ತು ಮಾರ್ಗಸೂಚಿ ತಯಾರಿಸಲು ಸ್ವತಂತ್ರವಾಗಿದೆ. ಆದರೆ, ಭಾರತದ ಸಂಸತ್ನಲ್ಲಿ ಹೊರಡಿಸಲಾದ ಕಾನೂನುಗಳನ್ನ ಅದು ಪಾಲಿಸಲೇಬೇಕಾಗುತ್ತದೆ” ಎಂಬುದು ಸರ್ಕಾರದ ವಾದ.