ಕುರುಬ ಹೋರಾಟದ ಯಶಸ್ಸು ಕಂಡು ಸಿದ್ದರಾಮಯ್ಯ ವರಸೆ ಬದಲಿಸಿದ್ದಾರೆ: ಈಶ್ವರಪ್ಪ ವ್ಯಂಗ್ಯ

ಹೈಲೈಟ್ಸ್‌:

  • ಹೋರಾಟ ಯಶಸ್ವಿಯಾಗಿದ್ದು ಸಿದ್ದರಾಮಯ್ಯ ಅವರಿಗೆ ಕಿರಿಕಿರಿ ಉಂಟಾಗಿದೆ
  • ಮೊದಲು ತಮ್ಮನ್ನು ಆಹ್ವಾನಿಸಿಲ್ಲ ಅಂದರು, ಬಳಿಕ ಪಾದಯಾತ್ರೆ ಬೇಕಿತ್ತಾ ಅಂದರು
  • ತಾವಿಲ್ಲದೇ ಲಕ್ಷಾಂತರ ಜನ ಸೇರಿದ್ದು, ಸಿದ್ದರಾಮಯ್ಯ ಅವರಿಗೆ ಬೇಸರ ತರಿಸಿದೆ

ಶಿವಮೊಗ್ಗ: ಕುರುಬ ಮೀಸಲಾತಿ ಹೋರಾಟಕ್ಕೂ ಮುನ್ನ ಕುಲಶಾಸ್ತ್ರ ಅಧ್ಯಯನ ವರದಿ ಬರಲಿ ಎಂದು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆಎಸ್‌ ಈಶ್ವರಪ್ಪ ತಿರುಗೇಟು ನೀಡಿದ್ದು ಸಿದ್ದರಾಮಯ್ಯ ಹೋರಾಟದ ಯಶಸ್ಸನ್ನ ಕಂಡು ವರಸೆ ಬದಲಾಯಿಸಿದ್ದಾರೆಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೋರಾಟ ಶುರುವಾಗುವ ಮುನ್ನ ಸಿದ್ದರಾಮಯ್ಯ ಮನೆಗೆ ಕಾಗಿನೆಲೆಯ ಜಗದ್ಗುರುಗಳಾದ ನಿರಂಜನನಾಂದಪುರಿ ಹಾಗೂ ಈಶ್ವರಾನಂದಪುರಿ ಶ್ರೀಗಳು ಭೇಟಿ ನೀಡಿದ್ದರು. ಆಗ ಸಿದ್ದರಾಮಯ್ಯ ಹೋರಾಟಕ್ಕೆ ಪಾಲ್ಗೊಳ್ಳುವುದನ್ನ ನಿರಾಕರಿಸಿ ದೂರ ಉಳಿಯುವುದಾಗಿ ಹಾಗೂ ಹೋರಾಟ ಶ್ರೀಗಳೇ ಮುಂದುವರಿಸಬೇಕೆಂದು ಹೇಳಿದ್ದರು. ಆಗ ಸಿದ್ದರಾಮಯ್ಯ ಏಕೆ ಕುಲಶಾಸ್ತ್ರ ಅಧ್ಯಯನ ಮೊದಲು ಆಗಲಿ ನಂತರ ಹೋರಾಟ ಮಾಡಿ ಎಂದು ಹೇಳಲಿಲ್ಲ ಎಂದು ಪ್ರಶ್ನಿಸಿದರು.

 

ಅಖಂಡ ಕರ್ನಾಟಕದ ಕುರುಬರು ಶ್ರೀಗಳ ನೇತೃತ್ವದಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ ನಂತರ ಸಿದ್ದರಾಮಯ್ಯ ಈಗ ಕುಲಶಾಸ್ತ್ರ ಅಧ್ಯಯನ ಆಗಲಿ ಎಂದು ಹೇಳುತ್ತಿದ್ದಾರೆ. ಹೋರಾಟ ಯಶಸ್ವಿಯಾಗುತ್ತಿರುವುದು ಸಿದ್ದರಾಮಯ್ಯಗೆ ಕಿರಿಕಿರಿ ತಂದಿದೆ. ತಾವಿಲ್ಲದೇ ಲಕ್ಷೋಪ ಲಕ್ಷ ಜನ ಸೇರುತ್ತಾರೆಂಬ ನಿರೀಕ್ಷೆ ಅವರಲ್ಲಿ ಇರಲಿಲ್ಲ ಎಂದು ಹೇಳಿದರು.

ಮೊದಲು ತಮ್ಮನ್ನ ಹೋರಾಟಕ್ಕೆ ಆಹ್ವಾನಿಸಿಲ್ಲ ಎಂದರು,ಬಳಿಕ ಸಮಾವೇಶ ಹಾಗೂ ಪಾದಯಾತ್ರೆ ಬೇಕಿತ್ತಾ ಅಂತ ಪ್ರಶ್ನಿಸಿದರು. ಅದಾದ ನಂತರ ಪಾದಯಾತ್ರೆಗೆ ಆರ್‌ಎಸ್‌ಎಸ್‌ ಹಣ ನೀಡಿದೆ ಎಂದರು. ಪೂಜ್ಯ ಜಗದ್ಗುರುಗಳೇ ಈ ಆರೋಪ ತಳ್ಳಿ ಹಾಕಿದ್ದಾರೆ. ಇಡೀ ಹೋರಾಟಕ್ಕೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ. ಕುರುಬ ಹೋರಾಟದ ಯಶಸ್ಸಿಗೆ ಸಂತೋಷ ಪಡಬೇಕಿದ್ದ ಸಿದ್ದರಾಮಯ್ಯ ನೋವಿನಲ್ಲಿದ್ದಾರೆಂದು ಈಶ್ವರಪ್ಪ ನುಡಿದರು.

ಇನ್ನು ತಾಲೂಕು ಪಂಚಾಯಿತಿ ರದ್ದು ಮಾಡಬೇಕು ಎಂದು ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಾಂವಿಧಾನಿಕವಾಗಿ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳು ನಡೆಯುತ್ತಿವೆ. ಅನೇಕರ ಬೇಡಿಕೆ ಹಾಗೂ ಅಭಿಮತ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳೆರಡೇ ಸಾಕು ಎಂಬುದಾಗಿದೆ. ತಾಲೂಕು ಪಂಚಾಯಿತಿ ಬೇಡ ಜಿಲ್ಲಾಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳೆರಡೇ ಸಾಕು ಎಂಬ ಅಭಿಪ್ರಾಯ ನನಗೂ ಇದೆ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *