ಮತ್ತಷ್ಟು ಮೀಸಲಾತಿ, ಸೌಲಭ್ಯಕ್ಕೆ ಹಲವು ಸಮುದಾಯಗಳ ಒತ್ತಾಯ: ಸ್ವಾಮೀಜಿಗಳ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ
ಬೆಂಗಳೂರು: ಕಳೆದ ಕೆಲ ತಿಂಗಳಿನಿಂದ ರಾಜ್ಯದಲ್ಲಿ ಹಲವು ಸಮುದಾಯಗಳು ಮೀಸಲಾತಿಗಾಗಿ, ಮೀಸಲಾತಿ ಹೆಚ್ಚಳಕ್ಕಾಗಿ ಒತ್ತಾಯಿಸುತ್ತಿವೆ. ಕೋಟಾ ವಿಭಾಗದಲ್ಲಿ ಬದಲಾವಣೆ ತರಬೇಕೆಂದು ಕೂಡ ಸರ್ಕಾರವನ್ನು ಆಗ್ರಹಿಸುತ್ತಿದ್ದು, ರಾಜ್ಯ ಸರ್ಕಾರ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದೆ.
ಸರ್ಕಾರದ ಮೇಲೆ ತೀವ್ರ ಮಟ್ಟದಲ್ಲಿ ಒತ್ತಡ ಹೇರಲು ಹಲವು ಸಮುದಾಯಗಳ ಸ್ವಾಮೀಜಿಗಳು ಪಾದಯಾತ್ರೆಗಳ ಮೂಲಕ, ಸಮ್ಮೇಳನವನ್ನು ನಡೆಸುವ ಮೂಲಕ ಸರ್ಕಾರ ಜಾಗೃತವಾಗುವಂತೆ ಮಾಡುತ್ತಿದೆ. ಕುರುಬ ಸಮಾಜ ಬೆಂಗಳೂರಿನಲ್ಲಿ ಈ ವಾರದ ಆರಂಭದಲ್ಲಿ ಸಮ್ಮೇಳನ ನಡೆಸಿ ತಮಗೆ ಪರಿಶಿಷ್ಟ ವರ್ಗ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿತ್ತು.
ಪ್ರಸ್ತುತ ಕನಿಷ್ಠ 8 ಸಮುದಾಯಗಳು ಮೀಸಲಾತಿ ವಿಭಾಗದಲ್ಲಿ ಬದಲಾವಣೆ ಮಾಡುವಂತೆ ಮತ್ತು ಈಗಿರುವ ಮೀಸಲಾತಿಯಲ್ಲಿ ಇನ್ನಷ್ಟು ಸೌಲಭ್ಯ ನೀಡುವಂತೆ ಒತ್ತಾಯಿಸುತ್ತಿವೆ. ಅವರ ಬೇಡಿಕೆಗಳನ್ನು ಈಡೇರಿಸಿದರೆ ಮತ್ತಷ್ಟು ಸಮುದಾಯಗಳು ಮೀಸಲಾತಿಗೆ ಆಗ್ರಹಿಸಬಹುದು, ಇನ್ನಷ್ಟು ಸಮಸ್ಯೆ ರಾಜ್ಯ ಸರ್ಕಾರಕ್ಕೆ ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ 101 ಜಾತಿಗಳು ಪರಿಶಿಷ್ಟ ಜಾತಿ, 53 ಜಾತಿಗಳು ಪರಿಶಿಷ್ಟ ವರ್ಗ ಮತ್ತು 207 ಜಾತಿಗಳು ಇತರ ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುತ್ತವೆ. ಹಲವು ಜಾತಿಗಳಿಗೆ ಮೀಸಲಾತಿ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಈಗಾಗಲೇ ಮೀಸಲಾತಿ ಅಡಿಯಲ್ಲಿರುವ ಜಾತಿಗಳು ಇನ್ನಷ್ಟು ಮೀಸಲಾತಿಗಾಗಿ, ಹೆಚ್ಚಿನ ಸೌಲಭ್ಯಕ್ಕಾಗಿ ಒತ್ತಾಯಿಸುತ್ತಿವೆ.
2 ಎ ವರ್ಗಕ್ಕೆ ಬರುವ ಕುರುಬರು ತಮ್ಮನ್ನು ಎಸ್‌ಟಿ ವರ್ಗಕ್ಕೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮಿ ಅವರ ನೇತೃತ್ವದಲ್ಲಿ ಸಮುದಾಯದ ಸದಸ್ಯರು 21 ದಿನಗಳ ಕಾಲ ಪಾದಯಾತ್ರೆ ಮಾಡಿ ಬೆಂಗಳೂರು ತಲುಪಿ ಕಳೆದ ವಾರ ಸಮಾವೇಶ ನಡೆಸಿದ್ದರು.
ಮೀಸಲಾತಿಯನ್ನು ಶೇಕಡಾ 3.5% ರಿಂದ ಶೇಕಡಾ 7.5% ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ವಾಲ್ಮೀಕಿ ಸಮುದಾಯವು ಇತ್ತೀಚೆಗೆ ದಾವಣಗೆರೆಯಲ್ಲಿ ರ್ಯಾಲಿ ನಡೆಸಿತು. ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಮಾರ್ಚ್ ವೇಳೆಗೆ ಎಸ್ಟಿ ಮೀಸಲಾತಿಯನ್ನು ಹೆಚ್ಚಿಸುವ ಭರವಸೆ ನೀಡಿದರು, ಈ ವೇಳೆ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮಿಗಳು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದ್ದರು. ರ್ಯಾಲಿಯಲ್ಲಿ ಬಿಜೆಪಿ ಮಂತ್ರಿಗಳಾದ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಕೂಡ ಭಾಗವಹಿಸಿದ್ದರು.
3 ಬಿ ಅಡಿಯಲ್ಲಿ ಬರುವ ಪಂಚಮಾಸಲಿ ಸಮುದಾಯವು ತಮ್ಮನ್ನು 2 ಎ ಅಡಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸುತ್ತಿದೆ. ಕೂಡಲಸಂಗಮ ಮಠದ ಜಯ ಮೃತ್ಯುಂಜಯ ಸ್ವಾಮಿ ಅವರು ಫೆಬ್ರವರಿ 21 ರಂದು 2 ಎ ವರ್ಗಕ್ಕೆ ಬರುವ ಈಡಿಗರು ರಾಜ್ಯ ಸರ್ಕಾರವು 2 ಎ ಅಡಿಯಲ್ಲಿ ಪಂಚಮಾಸಾಲಿಯನ್ನು ಸೇರಿಸಬಾರದು ಎಂದು ಒತ್ತಾಯಿಸುತ್ತಿದ್ದಾರೆ.
ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಶೇಕಡಾವಾರು ಹೆಚ್ಚಿಸುವ ಬೇಡಿಕೆಗಳನ್ನು ಪರಿಶೀಲಿಸಲು ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಆಯೋಗವನ್ನು ರಚಿಸಲಾಯಿತು.ನ್ಯಾಯಮೂರ್ತಿ ದಾಸ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಸಮುದಾಯಗಳ ಬೇಡಿಕೆಯಂತೆ ಮೀಸಲಾತಿ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಬದಲಾಗಿ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ನಿರ್ಲಕ್ಷಿತ ವಲಯದ ಬಗ್ಗೆ ಸರ್ಕಾರ ಗಮನಹರಿಸಿ ಮೀಸಲಾತಿ ನೀಡಬೇಕು, ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಎನ್ನುತ್ತಾರೆ.