ಕೇವಲ 49 ರೂ.ಗೆ ಭರ್ತಿ 65 ಕಿಮೀ ಮೈಲೇಜ್‌..! ಸಾಗರ ವಿದ್ಯಾರ್ಥಿಯಿಂದ ಹೊಸ ಬೈಕ್‌ ಆವಿಷ್ಕಾರ

ಹೈಲೈಟ್ಸ್‌:

  • ಸಾಗರ ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ಅದ್ಭುತ ಆವಿಷ್ಕಾರ
  • ಪರಿಸರ ಸ್ನೇಹಿ ವಾಹನ ಮಾಲೀಕರಿಗೆ ವರದಾನವಾದ ಸಂಶೋಧನೆ
  • ಕೇವಲ 49 ರೂ.ನಲ್ಲಿ 65 ಕಿಮೀ ಮೈಲೇಜ್‌ ನೀಡುವ ಬೈಕ್‌ ಆವಿಷ್ಕಾರ

ಸಾಗರ (ಶಿವಮೊಗ್ಗ): ಪ್ರಸ್ತುತ ಇಂಧನ ದರ ಗಗನಕ್ಕೇರುತ್ತಿದೆ, ಎಲ್ಲ ವಾಹನ ಸವಾರರ ಕಣ್ಣೂ ಕೆಂಪಾಗುತ್ತಿದೆ. ಈ ನಡುವೆಯೂ ಸಾಗರ ತಾಲೂಕಿನ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ವಾಹನಕ್ಕೆ ಪರ್ಯಾಯ ಇಂಧನವನ್ನು ಆವಿಷ್ಕಾರ ಮಾಡಿದ್ದು, ಎಲ್ಲರ ಹುಬ್ಬೇರಿಸಿದೆ. ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ನೀರಿನ ವೇಪರೈಸರ್‌ ಮೂಲಕ ರಾಸಾಯನಿಕ ಕ್ರಿಯೆ ಘಟಿಸಿದಾಗ ಉತ್ಪತ್ತಿಯಾಗುವ ಅಸಿಟೈಲಿನ್‌ ಅನಿಲದಿಂದ ದ್ವಿಚಕ್ರ ವಾಹನ ಚಲಾಯಿಸಬಹುದು ಎಂಬುದನ್ನು ಹೊಸ ಆವಿಷ್ಕಾರದ ಮೂಲಕ ತೋರಿಸಿಕೊಟ್ಟಿದ್ದಾರೆ.

 

ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ 4ನೇ ವರ್ಷದ ಮೆಕೆಟ್ರಾನಿಕ್ಸ್‌ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಗೌತಮ್‌ ಈ ಸಾಧನೆ ಮಾಡಿದ್ದು, ಈತ ತಾಲೂಕಿನ ಹಂದಿಗೋಡಿನ ಎಚ್‌.ಪಿ.ಶ್ರೀಧರ, ರೋಹಿಣಿ ದಂಪತಿಯ ಪುತ್ರ. ಈ ಹೊಸ ಪ್ರಾಜೆಕ್ಟ್‌ನ್ನು ಗೌತಮ್‌ ತಮ್ಮ ತಂಡದವರ ಜತೆ ಸೇರಿ ಸಿದ್ಧಪಡಿಸಿ, ರಾಷ್ಟ್ರೀಯ ಸ್ಪರ್ಧೆಗೆ ಸಲ್ಲಿಸಿದ್ದಾರೆ. ಕೆಪಿಟಿಟಿ ಸ್ಪಾರ್ಕಲ್‌ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಆಯ್ಕೆಯಾದ ಪ್ರಾಜೆಕ್ಟ್ ಈಗ ಗ್ರ್ಯಾಂಡ್‌ ಫಿನಾಲೆ ಹಂತದಲ್ಲಿದೆ. ಪ್ರಾಜೆಕ್ಟ್ ಟಾಪ್‌ 100ರ ಮನ್ನಣೆ ಸಹ ಗಳಿಸಿದೆ.

ಐಸಿ ಎಂಜಿನ್‌ ವಾಹನಗಳಿಗೆ ಪೆಟ್ರೋಲ್‌ ಬದಲು ಕ್ಯಾಲ್ಸಿಯಂ ಕಾರ್ಬೈಡ್‌ ಮತ್ತು ನೀರಿನ ರಾಸಾಯನಿಕ ಪ್ರಕ್ರಿಯೆಯಿಂದ ದೊರಕುವ ಅಸಿಟೈಲಿನ್‌ ಅನಿಲ ಬಳಸುವ ಮೂಲಕ ಕಡಿಮೆ ಪರಿಸರ ಮಾಲಿನ್ಯ, ಕಡಿಮೆ ಖರ್ಚು ಮತ್ತು ಉತ್ತಮ ನಿರ್ವಹಣೆ ಸಾಧ್ಯ. ಗೌತಮ ಅವರ ತಂದೆ ಕೂಡ ದ್ವಿಚಕ್ರ ವಾಹನಕ್ಕೆ ಟ್ಯಾಂಕ್‌ ಅಳವಡಿಸಿ, ಅಸಿಟೈಲಿನ್‌ ಅನಿಲವನ್ನು ಇಂಧನವಾಗಿ ಬಳಸಿ ಪರೀಕ್ಷಿಸಿದ್ದು ಯಶಸ್ಸು ಕಂಡಿದೆ. ಪ್ರಾಜೆಕ್ಟ್‌ನಲ್ಲಿ ಎಚ್‌.ಎಸ್‌.ಗೌತಮ್‌, ವಿಶಾಲ ಸರ್‌ವಂದ್‌, ಎಚ್‌.ಎಸ್‌.ವಶಿಷ್ಠ ಮತ್ತು ರಾಮದಾಸ್‌ ತಂಡವಾಗಿ ಕೆಲಸ ಮಾಡಿದ್ದಾರೆ.

65 ಕಿಮೀ ಮೈಲೇಜ್‌
49 ರೂ. ಕೊಟ್ಟು ಖರೀದಿಸಿದ 1 ಕೆಜಿ ಕಾಲ್ಸಿಯಂ ಕಾರ್ಬೈಡ್‌ನಿಂದ 1 ಕೆಜಿ ಅಸಿಟೈಲಿನ್‌ ಅನಿಲ ಉತ್ಪಾದಿಸಬಹುದು, ಈ ಅನಿಲದಿಂದ 65 ರಿಂದ 66 ಕಿ.ಮೀ. ಮೈಲೇಜ್‌ ಬರುತ್ತಿದೆ. ಬೈಕ್‌ಗೆ 5 ಸಾವಿರೂ ರೂ. ವೆಚ್ಚದ ಟ್ಯಾಂಕ್‌ ಅಳವಡಿಕೆ ಮಾಡಲಾಗಿದೆ. ಕ್ಯಾಲ್ಸಿಯಂ ಕಾರ್ಬೈಡ್‌ ಮೇಲೆ ವೇಪರೈಸರ್‌ ಮೂಲಕ ನೀರಿನ ವೆಫರ್ಸ್‌ ಸಂಪರ್ಕ ಆದಾಗ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಆಗ ಅಸಿಟೈಲಿನ್‌ ಗ್ಯಾಸ್‌ ಉತ್ಪಾದನೆ ಆಗುತ್ತದೆ. ಅದರಿಂದ ವಾಹನ ಚಲಿಸುತ್ತದೆ. ರಾಸಾಯನಿಕ ಕ್ರಿಯೆ ನಂತರ ತ್ಯಾಜ್ಯ ಕಲ್ಲಿನ ರೂಪದಲ್ಲಿ ಉಳಿಯುತ್ತದೆ. ಅದನ್ನು ಮರಳಿಸಿ ಕ್ಯಾಲ್ಸಿಯಂ ಕಾರ್ಬೈಡ್‌ ಪಡೆದುಕೊಳ್ಳಲು ಸಾಧ್ಯ.

ಭವಿಷ್ಯದಲ್ಲಿ ಪೆಟ್ರೋಲ್‌ ಬಳಕೆಯ ವಾಹನ ನಿಷೇಧವಾಗುವ ಅಪಾಯವಿದೆ. ಮಾಲಿನ್ಯದ ಅಪಾಯಗಳಿಂದ ವಿದೇಶಗಳಲ್ಲಿ 2030ರಲ್ಲಿಪೆಟ್ರೋಲ್‌ ವಾಹನಗಳ ನಿಷೇಧವಾಗುವ ಸಾಧ್ಯತೆಯಿದೆ. ಭಾರತದಲ್ಲಿ ಪೆಟ್ರೋಲ್‌ ಬಳಕೆ ಇಲ್ಲದ ವಾಹನ ಚಾಲನೆಗೆ ಪೂರಕ ಆವಿಷ್ಕಾರಗಳಿಗೆ ಅವಕಾಶವಿದೆ ಎನ್ನುತ್ತಾರೆ ಎಂಜಿನಿಯರಿಂಗ್‌ ವಿದ್ಯಾರ್ಥಿ ಎಚ್‌.ಎಸ್‌.ಗೌತಮ್‌.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *