ಮೀಸಲಾತಿ ಹೋರಾಟ: ಅಸಲಿ ಟಾರ್ಗೆಟ್ ಬಿಎಸ್‌ವೈ ಹಾಗೂ ಸಿದ್ದರಾಮಯ್ಯ!

ಹೈಲೈಟ್ಸ್‌:

  • ರಾಜ್ಯದಲ್ಲಿ ತೀವ್ರಗೊಳ್ಳುತ್ತಿದೆ ಮೀಸಲಾತಿ ಹೋರಾಟ
  • ಹೋರಾಟದ ಮೂಲಕ ಬಿಎಸ್‌ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಟಾರ್ಗೆಟ್
  • ರಾಜಕೀಯ ವಲಯದಲ್ಲಿ ನಡೆಯುತ್ತಿದೆ ಹೀಗೊಂದು ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಹೋರಾಟ ಸಾಕಷ್ಟು ಸದ್ದು ಮಾಡುತ್ತಿದೆ. 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂದು ಪಂಚಮಸಾಲಿ ಸಮುದಾಯ ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ ಎಸ್‌ಟಿಗೆ ಸೇರ್ಪಡೆ ಮಾಡಬೇಕು ಎಂದು ಕುರುಬ ಸಮುದಾಯ ಹೋರಾಟ ನಡೆಸುತ್ತಿದೆ. ಆದರೆ ಈ ಎರಡು ಹೋರಾಟವನ್ನು ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ

ಸಿದ್ದರಾಮಯ್ಯ ಅವರನ್ನು ಮಣಿಸಲು ಬಳಕೆಯಾಗುತ್ತಿವೆ ಎಂಬ ಚರ್ಚೆಗಳು ತೀವ್ರಗೊಳ್ಳುತ್ತಿವೆ.

ಸಿಎಂ ಬಿಎಸ್‌ ಯಡಿಯೂರಪ್ಪನವರಿಗೆ ಬೆಂಬಲವಾಗಿ ಲಿಂಗಾಯತ ಸಮುದಾಯದ ಬಂಡೆ ಕಲ್ಲಿನಂತೆ ನಿಲ್ಲುತ್ತಾ ಬಂದಿದೆ. ಆದರೆ ಇದೀಗ ಮೀಸಲಾತಿ ಹೋರಾಟದ ಮೂಲಕ ಸಮುದಾಯವನ್ನು ಬಿಎಸ್‌ವೈ ವಿರುದ್ಧ ಎತ್ತಿಕಟ್ಟುವ ತಂತ್ರಗಾರಿಕೆಯೂ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ. ತೆರೆಮರೆಯಲ್ಲಿ ಬಿಜೆಪಿ ಹೈಕಮಾಂಡ್‌ ಕೂಡಾ ಈ ಹೋರಾಟಕ್ಕೆ ಬೆಂಬಲ ನೀಡುತ್ತಿವೆ ಎಂಬವುದು ಬಿಜೆಪಿ ಮೂಲಗಳಿಂದ ತಿಳಿದುಬರುತ್ತಿದೆ.

ರಾಜ್ಯದಲ್ಲಿ ಬಿಎಸ್‌ವೈ ನಿಯಂತ್ರಣ ಮಾಡಲು ಹೈಕಮಾಂಡ್‌ ಮಟ್ಟದಲ್ಲಿ ಕುಳಿತುಕೊಂಡಿರುವ ನಾಯಕರೊಬ್ಬರು ಮೀಸಲಾತಿ ಹೋರಾಟಕ್ಕೆ ಗುಪ್ತ ಬೆಂಬಲ ನೀಡುತ್ತಾ ಬರುತ್ತಿದ್ದಾರೆ ಎಂಬುವುದು ಬಿಎಸ್‌ವೈ ಆಪ್ತರ ಆರೋಪವಾಗಿದೆ. ಈ ಮೂಲಕ ಯಡಿಯೂರಪ್ಪನವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಇದರ ಹಿಂದಿರುವ ತಂತ್ರಗಾರಿಕೆಯಂತೆ.

ಇದಕ್ಕೆ ಸಾಕ್ಷಿ ಎಂಬಂತೆ ಬಿಎಸ್‌ವೈ ವಿರುದ್ಧ ಕೆಂಡಕಾರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿ ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ಸಾಥ್ ನೀಡುತ್ತಾ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಲಿಂಗಾಯಿತ ಸಚಿವರು ಹಾಗೂ ಶಾಸಕರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ.

ಮತ್ತೊಂದು ಕಡೆಯಲ್ಲಿ ಸಿದ್ದರಾಮಯ್ಯ ನಿಯಂತ್ರಣದ ತಂತ್ರಗಾರಿಕೆಯೂ ಇಲ್ಲಿ ಎದ್ದು ಕಾಣುತ್ತಿದೆ. ಕುರುಬ ಸಮುದಾಯಕ್ಕೆ ಬಂಡೆ ಯಂತಿರುವ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಕುರುಬ ಸಮುದಾಯವನ್ನು ಎತ್ತಿಕಟ್ಟುವುದು ಕುರುಬರ ಮೀಸಲಾತಿ ಹೋರಾಟದ ಹಿಂದೆ ಇರುವಂತಹ ತಂತ್ರಗಾರಿಕೆ ಎಂಬುವುದು ಸಿದ್ದರಾಮಯ್ಯ ಆಪ್ತರ ಅಭಿಪ್ರಾಯವಾಗಿದೆ. ಸಂಘದ ಸಿದ್ದಾಂತದ ಪ್ರಕಾರ ಜಾತಿ ರಾಜಕಾರಣಕ್ಕೆ ಆದ್ಯತೆ ಕೊಡದ ಕೆ.ಎಸ್ ಈಶ್ವರಪ್ಪನವರನ್ನು ಇದೀಗ ಕುರುಬರ ನಾಯಕ ಎಂದು ಬಿಂಬಿಸುವ ಕೆಲಸವೂ ನಡೆಯುತ್ತಿದೆ ಈ ಮೂಲಕ ಸಿದ್ದರಾಮಯ್ಯ ಅವರಿಗೆ ಸಮುದಾಯದ ಮೂಲಕವೇ ಹೊಡೆತ ನೀಡುವುದು ಇದರ ಉದ್ದೇಶವಾಗಿದೆ ಎಂಬುವುದು ಸಿದ್ದು ಬೆಂಬಲಿಗರ ಆರೋಪವಾಗಿದೆ.

 

ತಂತ್ರಕ್ಕೆ ಪ್ರತಿತಂತ್ರ!

ಆದರೆ ಮೀಸಲಾತಿ ಅಸ್ತ್ರದ ವಿರುದ್ಧ ಬಿಎಸ್‌ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಇಬ್ಬರು ಪ್ರತಿತಂತ್ರ ಹೂಡಿದಂತಿದೆ. ಸದ್ಯ ಎರಡು ಸಮುದಾಯ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಇದೀಗ ಇತರ ಸಮುದಾಯಗಳಿಂದಲೂ ಮೀಸಲಾತಿ ಕೂಗು ತೀವ್ರಗೊಳ್ಳಲು ಶುರುವಾಗಿದೆ. ಗುಪ್ತ ಬೆಂಬಲ ನೀಡಿದವರಿಗೆ ತಿರುಗುಬಾಣವಾಗಿ ಪರಿಣಮಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ಶುರುವಾಗಿದೆ.

ಮತ್ತೊಂದು ಕಡೆಯಲ್ಲಿ ಕುರುಬ ಮೀಸಲಾತಿ ಬೇಡಿಕೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅಹಿಂದ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸಮಾವೇಶಗಳನ್ನು ಹಮ್ಮಿಕೊಳ್ಳುವ ತಯಾರಿಗಳು ನಡೆಯುತ್ತಿವೆ. ಒಟ್ಟಿನಲ್ಲಿ ಮೀಸಲಾತಿ ಅಸ್ತ್ರ ರಾಜ್ಯದ ಇಬ್ಬರು ಪ್ರಭಾವಿ ನಾಯಕರ ನಿಯಂತ್ರಣಕ್ಕೆ ವೇದಿಕೆ ಆಗುತ್ತಾ ಅಥವಾ ಇದನ್ನು ಬಳಸಿಕೊಂಡವರಿಗೆ ತಿರುಗುಬಾಣವಾಗುತ್ತಾ ಎಂಬುವುದು ಸದ್ಯದ ಕುತೂಹಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *