ಸಂತ ಸೇವಾಲಾಲ್, ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ ಹಾಗೂ ಕವಿ ಸರ್ವಜ್ಞರ ಜಯಂತಿಗಳನ್ನು ಸರಳವಾಗಿ ಆಚರಣೆಗೆ ನಿರ್ಧಾರ

ಇದೇ ಫೆಬ್ರವರಿ ಮಾಹೆಯಲ್ಲಿ ಜಿಲ್ಲಾಡಳಿತದಿಂದ ಆಚರಿಸಲಾಗುವ ಶ್ರೀ ಸಂತ ಸೇವಾಲಾಲ್, ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞರ ಜಯಂತಿಗಳನ್ನು ಸರಳವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಯಂತ್ಯೋತ್ಸವ ಸಮಿತಿ ಸಭೆ ಸರ್ವಾನುಮತದ ನಿರ್ಧಾರ ಕೈಗೊಂಡಿತು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಫೆಬ್ರವರಿ 15 ರಂದು ಶ್ರೀ ಸಂತ ಸೇವಾಲಾಲ್, ಫೆಬ್ರವರಿ 19 ರಂದು ಸವಿತಾ ಮಹರ್ಷಿ ಮತ್ತು ಛತ್ರಪತಿ ಶಿವಾಜಿ ಹಾಗೂ ಫೆಬ್ರವರಿ 20 ರಂದು ಸಂತ ಕವಿ ಸರ್ವಜ್ಞರ ಜಯಂತಿಗಳನ್ನು ಆಯಾ ದಿನದಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 9.30 ಗಂಟೆಗೆ ಶರಣ-ಸಂತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಿಸಲಾಗುತ್ತದೆ. ಅದೇ ರೀತಿ ತಾಲೂಕು ಮಟ್ಟದಲ್ಲಿ ತಾಲೂಕು ಆಡಳಿತದಿಂದ ಸಹ ಆಯೋಜಿಸಲಾಗುತ್ತದೆ ಎಂದರು.

ಶಿಷ್ಠಾಚಾರದಂತೆ ಎಲ್ಲಾ ಚುನಾಯಿತ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಕೋವಿಡ್-19 ಹಿನ್ನೆಲೆಯಲ್ಲಿ ಉಪನ್ಯಾಸ, ಸಾಂಸ್ಕøತಿಕ ಮತ್ತು ಮೆರವಣಿಗೆ ಕಾರ್ಯಕ್ರಮ ಇರುವುದಿಲ್ಲವಾದರಿಂದ ಸಮಾಜದ ಮುಖಂಡರು ಸಹಕರಿಸಬೇಕು ಎಂದ ಡಾ.ಶಂಕರ ವಣಿಕ್ಯಾಳ ಅವರು ಜಯಂತಿ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಸಮಾಜದ ಮುಖಂಡರಿಗೆ ತಿಳಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಕಡ್ಡಾಯ: ಫೆಬ್ರವರಿ 15 ರಂದು ಶ್ರೀ ಸಂತ ಸೇವಾಲಾಲ್, ಫೆಬ್ರವರಿ 19 ರಂದು ಸವಿತಾ ಮಹರ್ಷಿ ಮತ್ತು ಛತ್ರಪತಿ ಶಿವಾಜಿ ಹಾಗೂ ಫೆಬ್ರವರಿ 20 ರಂದು ಸಂತ ಕವಿ ಸರ್ವಜ್ಞರ ಜಯಂತಿಗಳನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು. ಈ ಸಂಬಂಧ ಸುತ್ತೋಲೆ ಹೊರಡಿಸಿ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರಿಗೆ ಡಾ.ಶಂಕರ ವಣಿಕ್ಯಾಳ ನಿರ್ದೇಶನ ನೀಡಿದರು.

ಸಭೆಯಲ್ಲಿ ಭಾಗವಹಿಸಿದ ವಿವಿಧ ಸಮಾಜದ ಮುಖಂಡರು ಸರ್ಕಾರದ ನಿರ್ದೇಶನದಂತೆ ವಿವಿಧ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಸಮರ್ಪಕವಾಗಿ ಶರಣ-ಸಂತರ ಜಯಂತಿ ಆಚರಣೆಯಾಗುತ್ತಿಲ್ಲ, ಇದನ್ನು ಕಡ್ಡಾಯಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯ ವಿಠ್ಠಲ ಜಾಧವ, ಬಂಜಾರಾ ಸರ್ಕಾರಿ-ಅರೇ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಬಿ.ನಾಯಕ್, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಆರ್.ಬಿ.ಜಗದಾಳೆ, ಪ್ರಧಾನ ಕಾರ್ಯದರ್ಶಿ ರಾಜು ಕಾಕಡೆ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಸುಭಾಷ ಬಾದಾಮಿ, ಪ್ರಧಾನ ಕಾರ್ಯದರ್ಶಿ ಶಂಕರ ಕಾಳನೂರ, ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಶಿವಶರಣಪ್ಪ ಎಲ್. ಕುಂಬಾರ, ಮುಖಂಡ ಹಣಮಂತ ಕುಂಬಾರ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಇಲಾಖೆಗಳ ಅಧಿಕಾರಿಗಳು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *