ರಾಜ್ಯದ 31ನೇ ಜಿಲ್ಲೆಯಾಗಿರುವ ವಿಜಯನಗರಕ್ಕೆ ಸಿಗಲಿದೆ ವಿಶೇಷ ಸ್ಥಾನಮಾನ: ಸಚಿವ ಆನಂದ್ ಸಿಂಗ್
ಬೆಂಗಳೂರು: ರಾಜ್ಯದ 31ನೇ ಜಿಲ್ಲೆಯಾಗಿ ಹೊರಹೊಮ್ಮಿರುವ ವಿಜಯನಗರಕ್ಕೂ ವಿಶೇಷ ಸ್ಥಾನಮಾನ ಸಿಗಲಿದೆ ಎಂದು ಸಚಿವ ಆನಂದ್ ಸಿಂಗ್ ಅವರು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ಭಾಗವಾಗಿ ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ಗುರುತಿಸಲು ಶೀಘ್ರದಲ್ಲಿಯೇ ರಾಜ್ಯಪಾಲ ವಜುಭಾಯ್ ವಾಲಾ ಅವರು ಅಧಿಕೃತ ಆದೇಶ ಹೊರಡಿಸಲಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆನಂದ್ ಸಿಂಗ್ ಅವರು, ವಿಜಯನಗರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕದ ಭಾಗವಾಗಿಸುವಂತೆ ರಾಜ್ಯಪಾಲರಿಗೆ ಸರ್ಕಾರ ಶಿಫಾರಸು ಮಾಡಿದ್ದು, ಇದರಂತೆ ಸಂವಿಧಾನದ 371 ಜೆ ಪರಿಚ್ಛೇದದ ಅಡಿಯಲ್ಲಿ ಈ ಪ್ರದೇಶಕ್ಕೆ ನೀಡಲಾದ ವಿಶೇಷ ಸ್ಥಾನಮಾನ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಜಿಲ್ಲೆಗೆ ಹೊಸದಾಗಿ ಯಾವುದೇ ನೂತನ ತಾಲೂಕುಗಳನ್ನು ಸೇರ್ಪಡೆಗೊಳಿಸಲಾಗುತ್ತಿಲ್ಲ. ಬಳ್ಳಾರಿಯ ಒಂದು ಭಾಗವೆಂದೇ ಜಿಲ್ಲೆಯನ್ನು ಪರಿಗಣಿಸಲಾಗುತ್ತಿದೆ. ಹೀಗಾಗಿ ಈ ಹಿಂದೆ ನೀಡಲಾಗಿದ್ದ ಎಲ್ಲಾ ಸ್ಥಾನಗಳೂ ಜಿಲ್ಲೆಗೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಕೆಎಂಇಆರ್ಸಿ ನಿಧಿಯಲ್ಲಿ ರೂ 17,000 ಕೋಟಿ ಹಣವಿದೆ. ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಮತ್ತಷ್ಟು ಹೊರೆಯನ್ನು ನೀಡದೆ. ಈ ಹಣವನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಸಲಾಗುತ್ತದೆ. ಆದರೆ, ಇದಕ್ಕೆ ಸುಪ್ರೀಂಕೋರ್ಟ್ ನೇಮಿಸಿರುವ ಸಮತಿಯ ಒಪ್ಪಿಗೆ ಅಗತ್ಯವಿದೆ. ತಾಲ್ಲೂಕುಗಳು ಒಂದೇ ಆಗಿರುವುದರಿಂದ ನಿಧಿ ಹಂಚಿಕೆಯೂ ಕೂಡ ಒಂದೇ ಆಗಿದೆ. ಮತ್ತೊಂದು ಪ್ರಧಾನ ಕಚೇರಿಯೊಂದಿಗೆ ಜಿಲ್ಲೆಯೂ ಬಳ್ಳಾರಿಯೊಂದಿಗೇ ಇರಲಿದೆ ಎಂದಿದ್ದಾರೆ.
371 ಜೆ ಪರಿಚ್ಛೇದದ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಇದರ ಅಡಿಯಲ್ಲಿ ಯಾವ ಯಾವ ಜಿಲ್ಲೆಗಳು ಬರಲಿವೆ ಎಂಬುದನ್ನು ರಾಜ್ಯಪಾಲರು ಸ್ಪಷ್ಟಪಡಿಸಬೇಕಿದೆ. ನೂತನವಾಗಿ ರಚನೆಗೊಂಡಿರುವ ಜಿಲ್ಲೆಗೆ ಹೆಚ್ಚುವರಿ ತಾಲೂಕುಗಳನ್ನು ಸೇರ್ಪಡೆಗೊಳಿಸದ ಕಾರಣ, ವಿಶೇಷ ಸ್ಥಾನಮಾನ ನೀಡುವಂತೆ ಸರ್ಕಾರ ಶಿಫಾರಸು ಮಾಡಲಿದೆ. ಇದಕ್ಕೆ ರಾಜ್ಯಪಾಲರು ಕೂಡ ಅನುಮತಿ ನೀಡಲಿದ್ದಾರೆಂದು ತಿಳಿಸಿದ್ದಾರೆ.