ಪರಿಶಿಷ್ಟ ಜಾತಿ ಎಡಗೈ, ಈಡಿಗರಿಗೆ ಪ್ರಾತಿನಿಧ್ಯದ ಸುಳಿವು; ಜಾರಕಿಹೊಳಿ ರಾಜೀನಾಮೆ ಬೆದರಿಕೆ..!?

ಹೈಲೈಟ್ಸ್‌:

  • ಐವರು ಕಾರ್ಯಾಧ್ಯಕ್ಷರನ್ನು ನೇಮಿಸಿದರೂ ಇನ್ನೂ ನಿಂತಿಲ್ಲ ಗೊಂದಲ
  • ಕೆಲವು ಜಾತಿಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ ಎಂದು ಕಾಂಗ್ರೆಸ್‌ನಲ್ಲಿ ಅಸಮಾಧಾನ
  • ಮತ್ತಿಬ್ಬರು ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಸುಳಿವು ಹಿನ್ನೆಲೆ
  • ಹೀಗಾದೆ ಹುದ್ದೆಗೆ ಘನತೆ ಗೌರವ ಇರಲ್ಲ ಎಂದು ಸತೀಶ್‌ ಜಾರಕಿಹೊಳಿ ಅಸಮಾಧಾನ?

ಬೆಂಗಳೂರು: ಈಗಾಗಲೇ ಕೆಪಿಸಿಸಿಗೆ ಐವರು ಕಾರ್ಯಾಧ್ಯಕ್ಷರನ್ನು ನೇಮಿಸಿದ್ದರೂ ಕೆಲವೊಂದು ಜಾತಿಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ಮತ್ತಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸುವ ಪ್ರಯತ್ನಗಳು ನಡೆದಿವೆ.

ಈಗಾಗಲೇ ಲಿಂಗಾಯತ (ಈಶ್ವರ ಖಂಡ್ರೆ), ಮುಸ್ಲಿಂ (ಸಲೀಂ ಅಹಮದ್‌), ವಾಲ್ಮೀಕಿ (ಸತೀಶ್‌ ಜಾರಕಿಹೊಳಿ) ರೆಡ್ಡಿ (ರಾಮಲಿಂಗಾರೆಡ್ಡಿ) ಹಾಗೂ ಪರಿಶಿಷ್ಟ ಜಾತಿಯ ಬಲಗೈ (ಧ್ರುವನಾರಾಯಣ) ಗುಂಪಿಗೆ ಸೇರಿದವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ ಪರಿಶಿಷ್ಟ ಜಾತಿಯ ಎಡಗೈ ಹಾಗೂ ಹಿಂದುಳಿದ ವರ್ಗ ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆತಿಲ್ಲವೆಂಬ ಕಾರಣಕ್ಕೆ ಈ ಸಮುದಾಯಗಳಲ್ಲಿಅಸಮಾಧಾನ ಹೊಗೆಯಾಡುತ್ತಿದೆ.

ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾಗಿದ್ದರೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುರುಬ ಹಾಗೂ ಮೇಲ್ಮನೆ ಪ್ರತಿಪಕ್ಷ ನಾಯಕರಾದ ಎಸ್‌.ಆರ್‌.ಪಾಟೀಲ್‌ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎಲ್ಲಿಯೂ ಪ್ರಾತಿನಿಧ್ಯ ನೀಡದ ದಲಿತ ಸಮುದಾಯದ ಎಡಗೈ ಗುಂಪಿಗೆ ಸೇರಿದ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಇಲ್ಲವೇ ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ, ಈಡಿಗ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.

ರಾಜೀನಾಮೆ ಬೆದರಿಕೆ: ಒಂದು ವೇಳೆ ಕೆಪಿಸಿಸಿಗೆ ಮತ್ತಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಿದರೆ ರಾಜೀನಾಮೆ ನೀಡುವುದಾಗಿಯೂ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಕಾರ್ಯಾಧ್ಯಕ್ಷರ ಜತೆಗೆ ಒಬ್ಬರು ಇಲ್ಲವೇ ಇಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸುವುದು ಸಹಜ. ಮೊದಲ ಕಂತಿನಲ್ಲಿ ಮೂವರು ಹಾಗೂ 2ನೇ ಕಂತಿನಲ್ಲಿ ಇಬ್ಬರು ಸೇರಿದಂತೆ ಒಟ್ಟು ಐವರು ಕಾರ್ಯಾಧ್ಯಕ್ಷರನ್ನು ನೇಮಿಸಲಾಗಿದೆ. ಈಗ ಮತ್ತೊಂದು ಕಂತಿನಲ್ಲಿ ಮತ್ತಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಲು ತೆರೆಮರೆ ಪ್ರಯತ್ನಗಳ ನಡೆದಿವೆ. ಈ ರೀತಿಯಾದರೆ ಈ ಹುದ್ದೆಗೆ ಯಾವುದೇ ಘನತೆ, ಗೌರವ ಇರುವುದಿಲ್ಲ. ಹೀಗಾಗಿ ರಾಜೀನಾಮೆ ನೀಡಲು ಸಿದ್ಧ ಎಂಬ ಸಂದೇಶವನ್ನು ಈಗಾಗಲೇ ಎಐಸಿಸಿಗೆ ರವಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *