ದೇಶದಲ್ಲಿ ರೈಲು ರೋಕೋ ಚಳವಳಿ ಶಾಂತಿಯುತವಾಗಿ ನಡೆಯಲಿದೆ: ರಾಕೇಶ್ ಟಿಕೈತ್
ಘಾಜಿಯಾಬಾದ್: ಕೃಷಿ ಕಾಯ್ದೆ ವಿರೋಧಿಸಿ ಗುರುವಾರ ನಡೆಯಲಿರುವ ರೈಲು ರೋಕೋ ಚಳವಳಿ ಶಾಂತಿಯುತವಾಗಿ ನಡೆಯಲಿದ್ದು, ಪ್ರತಿಭಟನೆ ವೇಳೆ ಸಂಕಷ್ಟಕ್ಕೆ ಸಿಲುಕುವ ಜನರಿಗೆ ನೀರು, ಆಹಾರದ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈತ್ ಅವರು ಹೇಳಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಯಿಂದ ಚಳವಳಿ ಆರಂಭವಾಗಲಿದ್ದು, ಮಧ್ಯಾಹ್ನ 3-4 ಗಂಟೆಯವರೆಗೆ ಮುಂದುವರೆಯಲಿದೆ. ರೈಲುಗಳು ಚಲಿಸಲು ಬಿಡುವುದಿಲ್ಲ. ಶಾಂತಿಯುತವಾಗಿಯೇ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆ ವೇಳೆ ಸಂಕಷ್ಟಕ್ಕೆ ಸಿಲುಕುವ ಜನರಿಗೆ ನೀರು, ಹಾಲು, ಲಸ್ಸಿ ಹಾಗೂ ಹಣ್ಣಿನ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಜನರಿಗೆ ನಮ್ಮ ಸಂಕಷ್ಟಗಳನ್ನು ವಿವರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹಿಸಾರ್ ನಲ್ಲಿ ಇಂದು ರ್ಯಾಲಿ ನಡೆಸುತ್ತಿದ್ದೇವೆ. ಇಂದು ಅಲ್ಲಿಗೆ ತೆರಳುತ್ತಿದ್ದೇನೆ. ನಾಳೆ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದೇ ರೀತಿ ದೇಶದ ಪ್ರತೀ ಮೂಲೆ ಮೂಲೆಯಲ್ಲಿಯೂ ಪ್ರತಿಭಟನೆ ನಡೆಸುತ್ತೇವೆ. ದೇಶದ ಪ್ರತೀಯೊಂದು ಪ್ರದೇಶದಲ್ಲಿಯೂ ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ದೂರಾಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಜನವರಿ 26 ರಂದು ನಡೆದ ಹಿಂಸಾಚಾರವನ್ನು ಟಿಕೈತ್ ಅವರು ಖಂಡಿಸಿದ್ದು, ಹಿಂಸಾಚಾರ ಸೃಷ್ಟಿಸಿದವರಿಗೂ ಭಾರತೀಯ ಕೀಸಾನ್ ಯೂನಿಯನ್’ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿ, ಅಲ್ಲಿಯೂ ರೈತರೊಂದಿಗೆ ಮಾತುಕತೆ ನಡೆಸುತ್ತೇನೆ. ಅಲ್ಲಿನ ಚುನಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ರಾಜಕೀಯಕ್ಕೂ ಸೇರ್ಪಡೆಗೊಳ್ಳುತ್ತಿಲ್ಲ. ರಾಜಕೀಯ ಎಂಬುದು ದೊಡ್ಡ ಪಿಡುಗು. ಅದರಿಂದ ನಾನು ದೂರವೇ ಇರುತ್ತೇನೆಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಿ ಕಳೆದ 3 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ದೇಶದಾದ್ಯಂತ 4 ತಾಸುಗಳ ರೈಲು ರೋಕೋ ಚಳವಳಿ ನಡೆಸುತ್ತಿದ್ದಾರೆ.
ಕಾಯ್ದೆಗಳ ವಿರುದ್ಧ ಹೆಚ್ಚು ವಿರೋಧ ವ್ಯಕ್ತವಾಗಿರುವ ಪಂಜಾಬ್, ಹರಿಯಾಣ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಚಳವಳಿಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ಸಾಧ್ಯತೆಗಳಿದ್ದು, ಈ ರಾಜ್ಯಗಳಲ್ಲಿ ಹೆಚ್ಚಿನ ಭದ್ರತೆಗಳನ್ನು ನಿಯೋಜಿಸಲಾಗಿದೆ.