ಅಂತ್ಯಕ್ರಿಯೆಗೆ ಸಿದ್ದು, ಯಶ್ ಬರ್ಬೇಕು ಅಂತಾ ಡೆತ್ ನೋಟ್ ಬರೆದು ನೇಣಿಗೆ ಶರಣಾದ ಮಂಡ್ಯದ ಯುವಕ
ನನ್ನ ಅಂತ್ಯಕ್ರಿಯೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬರಬೇಕು ಎಂಬುದಾಗಿ ಪತ್ರ ಬರೆದಿಟ್ಟು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ನನಗೆ ಜೀವನ ಸಾಕಾಗಿ ಹೋಗಿದೆ, ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇನೆ, ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿ. ನನ್ನ ಅಂತ್ಯ ಸಂಸ್ಕಾರದಲ್ಲಿ ಅವರಿಬ್ಬರೂ ಪಾಲ್ಗೊಳ್ಳಬೇಕು ಎಂಬುದಾಗಿ ಪತ್ರ ಬರೆದಿಟ್ಟು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ತಾಲ್ಲೂಕಿನ ಕೋಡಿದೊಡ್ಡಿ ಗ್ರಾಮದ ಕೃಷ್ಣ (24) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಹಲವು ದಿನಗಳಿಂದ ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಒಂಟಿಯಾಗಿರುತ್ತಿದ್ದನು ಎನ್ನಲಾಗಿದೆ. ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಕೃಷ್ಣ ಕೊಠಡಿಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪತ್ರದಲ್ಲಿ ದಯವಿಟ್ಟು ನನ್ನನ್ನು ಎಲ್ಲರೂ ಕ್ಷಮಿಸಿ, ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ, ನಿಮಗೆ ನೋವು ಕೊಟ್ಟಿದ್ದೀನಿ, ಅಮ್ಮನಿಗೆ ಒಳ್ಳೆಯ ಮಗನಾಗಲಿಲ್ಲ, ಅಣ್ಣನಿಗೆ ಒಳ್ಳೆಯ ತಮ್ಮನಾಗಲಿಲ್ಲ, ಗೆಳೆಯರಿಗೆ ಸ್ನೇಹಿತನಾಗಲಿಲ್ಲ, ನಾನು ಪ್ರೀತಿಸಿದ ಯುವತಿಗೆ ಜೊತೆಗಾರನಾಗಿ ಬಾಳ ಸಂಗಾತಿಯಾಗಲು ವಿಫಲನಾಗಿದ್ದೇನೆ. ಆದ್ದರಿಂದ ನಾನು ನಿಮ್ಮಿಂದ ದೂರವಾಗಬೇಕೆಂದು ತೀರ್ಮಾನಿಸಿ ಸ್ವ ಇಚ್ಛೆಯಿಂದ ಮರಣ ಹೊಂದುತ್ತಿದ್ದೇನೆ ಎಂದು ಡೆತನೋಟ್ ಬರೆದಿಟ್ಟಿದ್ದಾನೆ.
ನಾನು ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿದ್ದರಾಮಯ್ಯ ಅವರ ಅಪ್ಪಟ ಅಭಿಮಾನಿ. ನನ್ನ ಅಂತ್ಯಕ್ರಿಯೆಯಲ್ಲಿ ಇವರಿಬ್ಬರೂ ಆಗಮಿಸಬೇಕೆಂಬುದು ನನ್ನ ಕೊನೆಯ ಆಸೆ. ದಯವಿಟ್ಟು ಈಡೇರಿಸಿ ಪ್ಲೀಸ್ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾನೆ. ಪೊಲೀಸರು ಸ್ಥಳದಲ್ಲಿ ದೊರೆತ ಟೆತ್ನೋಟ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.