ರಾಮಮಂದಿರಕ್ಕೆ ಹಣ ಕೇಳಲು ನಮ್ಮ ಮನೆಗೂ ಬಂದಿದ್ರು, ಯಾರಪ್ಪಾ ಅಂತ ಕೇಳಿದ್ದಕ್ಕೆ ನನಗೇ ಬೆದರಿಕೆ ಹಾಕಿದ್ರು : ಹೆಚ್ಡಿಕೆ
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿವಾದ ಸೃಷ್ಠಿ ಮಾಡಿದೆ. ಈ ಬಗ್ಗೆ ಇಂದು ಬೆಂಗಳೂರಿನ ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ತನ್ನ ಮಾತಿಗೆ ಸ್ಪಷ್ಟೀಕರಣ ನೀಡಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ, ಆದರೆ ಚಂದಾ ಎತ್ತುವ ರೀತಿ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ ಅಷ್ಟೇ, ನಮ್ಮ ಮನೆಗೆ ಒಂದು ಮೂರ್ನಾಲ್ಕು ಬಾರಿ ಚಂದಾ ಪಡೆಯಲು ಬಂದಿದ್ರು, ಅದ್ಯಾರೋ ಹೆಣ್ಣುಮಗಳೂ ಬಂದಿದ್ಲು, ಅವರ ಬಳಿ ಯಾರಪ್ಪಾ ನೀವು ಎಂದು ಕೇಳಿದ್ದಕ್ಕೆ ನನಗೇ ಬೆದರಿಕೆ ಹಾಕಿದ್ದರು. ಎಂದು ಹೇಳಿದರು.
ಇನ್ನು ರಾಮಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲವೇ ಇಲ್ಲ. ನಮ್ಮ ಪಕ್ಷದ ನಾಯಕ, ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್ ಅವರೂ ಕೂಡಾ ರಾಮಮಂದಿರ ನಿರ್ಮಾಣಕ್ಕೆ ೨೫ ಲಕ್ಷ ಕೊಟ್ಟಿದ್ದಾರೆ. ರಾಮ ಮಂದಿರ ದೇಣಿಗೆ ಸಂಗ್ರಹದ ನೆಪದಲ್ಲಿ ಬೆದರಿಕೆ ಹಾಕ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ, ನನ್ನ ಹೇಳಿಕೆಗೆ ಈಗಲೂ ನಾನು ಬದ್ಧವಾಗಿದ್ದೇನೆ. ನಾನೇನೂ ರಾಮನ ವಿರುದ್ಧವಾಗಿ ಮಾತನಾಡಿಲ್ಲ ಧರ್ಮದ ಹೆಸರಲ್ಲಿ ಮುಗ್ದರ ಹೆಸರು ಕೆಡಿಸಬೇಡಿ ಎಂದಿದ್ದೇನೆ. ಇನ್ನು ನನ್ನ ಹೇಳಿಕೆಯ ಬಗ್ಗೆ ಅನೇಕ ಹಿಂದೂ ನಾಯಕರು ಹೇಳಿಕೆ ಕೊಟ್ಟಿದ್ದಾರೆ ಅದೆಲ್ಲಾ ಕೇವಲ ಪಬ್ಲಿಸಿಟಿ ಗಿಮಿಕ್ ಅಷ್ಟೇ ಎಂದರು. ನಾನು ಮತ್ತು ನನ್ನ ಪಕ್ಷ ಎಂದಿಗೂ ಧರ್ಮವನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಧರ್ಮವನ್ನು ಬಳಸಿಕೊಂಡು ರಾಜಕೀಯ ಮಾಡ್ತಿಲ್ಲ, ಆದರೆ ರಾಮ ಮಂದಿರ ದೇಣಿಗೆ ಹಣ ದುರ್ಬಳಕೆಯಾಗ್ತಿದೆ ಇದರ ಲೆಕ್ಕ ಇಡುವವರು ಯಾರು ಎಂದಷ್ಟೇ ಕೇಳಿದ್ದೇನೆ. ಆ ಹೇಳಿಕೆಗೆ ಈಗಲೂ ನಾನು ಬದ್ದನಾಗಿದ್ದೇನೆ ಎಂದು ಹೇಳಿದರು.