ಅಭಿಮಾನಿಯ ಅಂತ್ಯಕ್ರಿಯೆಗೆ ಬಂದ ಸಿದ್ದರಾಮಯ್ಯ, ಅಲ್ಲಿ ಆಡಿದ ಮಾತುಗಳೇನು ಗೊತ್ತಾ.?
ಅಭಿಮಾನಿಯೊಬ್ಬ ಸಿದ್ದರಾಮಯ್ಯ ಹಾಗೂ ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕು ಎಂದು ಡೆತ್ ನೋಟಿನಲ್ಲಿ ಬರೆದುಕೊಂಡು ಆತ್ಮಹತ್ಮೆಗೆ ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂದು ಕಿವಿಮಾತು ಹೇಳಿದರು.
ಡೇತ್ ನೋಟ್‍ನಲ್ಲಿ ನಾನು ಸಿದ್ದರಾಮಯ್ಯ ಅವರ ಅಭಿಮಾನಿ, ಅವರು ನನ್ನ ಅಂತ್ಯಕ್ರಿಯೆಗೆ ಬರಬೇಕೆಂದು ಬರೆದಿದ್ದರಂತೆ. ನನಗೆ ಈ ವಿಷಯ ತಿಳಿದ ಮೇಲೆ ಅಂತ್ಯಕ್ರಿಯೆ ಬರಬೇಕು ಎಂದು ಬಂದಿದ್ದೇನೆ. ನನಗೆ ಆತ ಅಂತಹ ಪರಿಚಯ ಇಲ್ಲ. ಪಾಪ ಆತ ನನಗೆ ಗೋತ್ತಿಲ್ಲದೇ ದೊಡ್ಡ ಅಭಿಮಾನಿಯಾಗಿದ್ದ. ಆತ ಡೆತ್ ನೋಟ್‍ನಲ್ಲಿ ಹಾಗೆ ಬರೆದುಕೊಂಡಿದ್ದಾನೆ. ನನ್ನ ಅಂತ್ಯಕ್ರಿಯೆಗೆ ಬರಬೇಕೆಂದು ಬರೆದುಕೊಂಡಿದ್ದಾನೆ. ಅಭಿಮಾನಿಯಾಗಲಿ ಆಗದೇ ಇರಲಿ. ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದುಕೊಂಡಿದ್ದರಿಂದ, ನಾನು ಬರಲೇ ಬೇಕು. ಹೀಗಾಗಿ ನಾನು ಅಂತ್ಯ ಸಂಸ್ಕಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
ಪಾಪ ಸಾಮಾನ್ಯ ಕುಟುಂಬದಿಂದ ಬಂದಿದ್ದ ವ್ಯಕ್ತಿ ಆತ, ಮನೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ. ಈತನ ಸಾವಿನಿಂದ ಮನೆಯವರಿಗೆ ನಷ್ಟ ಆಗಿದೆ. ಆತನ ತಾಯಿ-ಅಣ್ಣನನ್ನು ನಾನು ಮಾತನಾಡಿಸಿದೆ. ಇನ್ನೂ ಚಿಕ್ಕ ವಯಸ್ಸು ಮದುವೆಯಾಗಿಲ್ಲ. ಚಿಕ್ಕ ವಯಸ್ಸಿಗೆ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ. ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ಮಾತ್ರ ಅಲ್ಲ ಸಮಾಜಕ್ಕೂ ನಷ್ಟ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.
ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರ ಅಲ್ಲ. ಆತ್ಮಹತ್ಯೆ ಮನಸ್ಸು ಮಾಡೋದು ಸರಿಯಾದ ನಿರ್ಧಾರ ಅಲ್ಲ. ಎಷ್ಟೇ ತೊಂದರೆ ಇರಲಿ ಸಮಸ್ಯೆ ಇರಲಿ. ಮನೆಯವರ ಜೊತೆ ಸ್ನೇಹಿತರ ಜೊತೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.