ರೂಪಾಂತರ ಕೊರೊನಾ ಹಾವಳಿ, ಮಹಾರಾಷ್ಟ್ರದಲ್ಲಿ ಮತ್ತೆ ಸೀಲ್‌ಡೌನ್

ಮುಂಬಯಿ: ಇಳಿಮುಖದ ಹಾದಿಯಲ್ಲಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ ಮೂರು ವಾರಗಳಿಂದ ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪ್ರಸರಣ ತಡೆಗೆ ಮಹಾರಾಷ್ಟ್ರ ಸರಕಾರವು ಮುಂಬಯಿ ಮತ್ತು ನಾಗಪುರಗಳಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದೆ.

 

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದ ಬೆನ್ನಲ್ಲೇ ಹೊಸ ನಿರ್ಬಂಧಗಳು ಹೊರಬಿದ್ದಿವೆ. ಎಪ್ಪತೈದು ದಿನಗಳ ಬಳಿಕ ಮಹಾರಾಷ್ಟ್ರದಲ್ಲಿ ಶುಕ್ರವಾರ ಕೊರೊನಾ ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಇದರ ಬೆನ್ನಲ್ಲೇ ಮುಂಬಯಿ ಹಾಗೂ ನಾಗಪುರ ಮಹಾನಗರ ಪಾಲಿಕೆಗಳು ಸೀಲ್‌ಡೌನ್‌ ಸೇರಿ ಹಲವು ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಿವೆ.

ಐದಕ್ಕಿಂತಲೂ ಹೆಚ್ಚಿನ ಸೋಂಕಿತರು ಪತ್ತೆಯಾದಲ್ಲಿ ಅಂತಹ ಕಟ್ಟಡವನ್ನು ಸೀಲ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳೇ ಹೆಚ್ಚಿರುವ ಕಾರಣ ಸೋಂಕು ಪ್ರಸರಣ ನಿಯಂತ್ರಣಕ್ಕೆ ಇದು ಅಗತ್ಯ ಎಂದು ಎರಡೂ ಪಾಲಿಕೆಗಳು ಹೇಳಿವೆ. ಹೋಟೆಲ್‌ಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆಗಳಲ್ಲಿ 20ಕ್ಕೂ ಹೆಚ್ಚು ಜನರು ಭಾಗವಹಿಸುವಂತಿಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸದೇ ಅಡ್ಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 5,000 ಮಾರ್ಷಲ್‌ಗಳನ್ನು ಬೃಹನ್ಮುಂಬಯಿ ಮಹಾನಗರ ಪಾಲಿಕೆ ನೇಮಕ ಮಾಡಿಕೊಂಡಿದೆ. ಆ ಪೈಕಿ 300 ಜನರನ್ನು ರೈಲ್ವೆ ನಿಲ್ದಾಣಗಳಲ್ಲಿ ನೇಮಕ ಮಾಡಲಾಗಿದೆ.

ಜುಹು ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಮಾಸ್ಕ್‌ ಧರಿಸದ ವ್ಯಕ್ತಿಗಳು ಮಾರ್ಷಲ್‌ಗಳ ಜತೆ ಸಂಘರ್ಷಕ್ಕೆ ಇಳಿದಿದ್ದು ಶುಕ್ರವಾರ ಕಂಡುಬಂತು. ”ಸೋಂಕಿತರು ಹೋಮ್‌ ಐಸೋಲೇಷನ್‌ ನಿಯಮ ಪಾಲಿಸುತ್ತಿಲ್ಲ. ಮದುವೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸರಕಾರ ಎಚ್ಚರಿಕೆ ನೀಡಿದೆ.


ಯಾವತ್ಮಲ್‌ನಲ್ಲಿ ಲಾಕ್‌ಡೌನ್‌: 
ಯಾವತ್ಮಲ್‌ ಜಿಲ್ಲಾಡಳಿತವು ಗುರುವಾರ ರಾತ್ರಿಯಿಂದಲೇ 10 ದಿನಗಳ ಲಾಕ್‌ಡೌನ್‌ ಘೋಷಿಸಿದೆ. ಜಿಲ್ಲೆಯಲ್ಲಿ 5ರಿಂದ 9ನೇ ತರಗತಿವರೆಗೆ ಶಾಲೆಗಳನ್ನು ಹಾಗೂ ಕಾಲೇಜು ಮತ್ತು ಕೋಚಿಂಗ್‌ ಸೆಂಟರ್‌ಗಳನ್ನು ಫೆ.28 ರವರೆಗೆ ಮುಚ್ಚಲಾಗಿದೆ. ಅಮರಾವತಿಯಲ್ಲಿವೀಕೆಂಡ್‌ ಲಾಕ್‌ಡೌನ್‌ ಘೋಷಿಸಲಾಗಿದೆ. ವಾರ್ಧಾ ನಗರದಲ್ಲಿ ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 8ರವರೆಗೆ ಕಫ್ರ್ಯೂ ಹೇರಲಾಗಿದೆ. ಆದರೆ ಅಗತ್ಯ ಸೇವೆಗಳಿಗೆ ಹಾಗೂ ತುರ್ತು ಸಂಚಾರಕ್ಕೆ ಯಾವುದೇ ತೊಡಕಾಗದು ಎಂದು ಸ್ಥಳೀಯ ಆಡಳಿತ ಹೇಳಿದೆ.

ಲಸಿಕೆ ಲಭ್ಯತೆಗೆ ಆಗ್ರಹ: ಪುಣೆಯ ನಾಲ್ಕು ವಾರ್ಡ್‌ಗಳಲ್ಲಿಕೊರೊನಾ ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಈ ಮಧ್ಯೆ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಕೊರೊನಾ ನಿರೋಧಕ ಲಸಿಕೆಗಳು ಖಾಸಗಿ ಆಸ್ಪತ್ರೆಗಳಲ್ಲೂಲಭ್ಯ ಇರುವಂತೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರಿಗೆ ಪತ್ರ ಬರೆದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *