2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರಿಂದ ಮಾರ್ಚ್ 4ರವರೆಗೆ ಧರಣಿ
ಮುಖ್ಯಮಂತ್ರಿಗಳು ಮನಸು ಮಾಡಿದ್ದರೆ ಪಂಚಮಸಾಲಿ ಸಮಾಜದವರಿಗೆ ಇಷ್ಟೊತ್ತಿಗೆ ನೀಡಬಹುದಿತ್ತು. ಈಗ ಸಿಗದಿದ್ದರೆ ಮತ್ಯಾವತ್ತೂ ಮೀಸಲಾತಿ ಸಿಗುವುದಿಲ್ಲ. ಹೀಗಾಗಿ, ಮಾರ್ಚ್ 4ರವರೆಗೆ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರು(ಫೆ. 22): ಪಂಚಮಸಾಲಿ ಲಿಂಗಾಯತ ಸಮುದಾಯದವರಿಗೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಮತ್ತೊಂದು ಹಂತ ತಲುಪಿದೆ. ಜನವರಿ 14ರಿಂದ ಕೂಡಲಸಂಗಮದಿಂದ ಆರಂಭವಾದ ಸಮುದಾಯ ಜನಗಳ ಪಾದಯಾತ್ರೆ ನಿನ್ನೆ ಭಾನುವಾರ ಫ್ರೀಡಂಪಾರ್ಕ್ನಲ್ಲಿ ಬೃಹತ್ ಸಮಾವೇಶದಲ್ಲಿ ಅಂತ್ಯಗೊಂಡಿತು. ಇದೀಗ ಮಾರ್ಚ್ 4ರವರೆಗೆ ಸರ್ಕಾರಕ್ಕೆ ಗಡುವು ನೀಡಿದೆ. ಅಲ್ಲಿಯವರೆಗೆ ಮೌರ್ಯ ಸರ್ಕಲ್ನಲ್ಲಿ ಧರಣಿ ನಡೆಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಸಾಕಷ್ಟು ಜನರು ಈಗಾಗಲೇ ಮೌರ್ಯ ವೃತ್ತದತ್ತ ಬಂದು ಸೇರತೊಡಗುತ್ತಿದ್ದಂತೆಯೇ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿದೆ. ಮೌರ್ಯ ಸರ್ಕಲ್ನಲ್ಲಿ ಧರಣಿ ನಡೆಸಿದರೆ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಪ್ರತಿಭಟನಾಕಾರರನ್ನ ಫ್ರೀಡಂ ಪಾರ್ಕ್ಗೆ ಹೋಗುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಪ್ರತಿಭಟನಾಕಾರರು ಸ್ವಾತಂತ್ರ್ಯ ಉದ್ಯಾನದಲ್ಲೇ ಇಂದಿನಿಂದ ಮಾರ್ಚ್ 4ರವರೆಗೆ ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ.
ಪಂಚಮಸಾಲಿಗಳ ಹೋರಾಟದ ನೇತೃತ್ವ ವಹಿಸಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರಕ್ಕೆ ಮನಸ್ಸಿದ್ದರೆ ಇಷ್ಟೊತ್ತಿಗೆಲ್ಲಾ ಪಂಚಮಸಾಲಿಗಳ ಬೇಡಿಕೆ ಈಡೇರಿಸಬಹುದಿತ್ತು. ಸಿಎಂ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜವನ್ನ ಕಡೆಗಣಿಸುತ್ತಿದ್ದಾರೆ. ಭಾನುವಾರ ನಮ್ಮ ಶಕ್ತಿ ಪ್ರದರ್ಶನ ನೋಡಿಯೂ ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ರಾಜಕೀಯ ಪ್ರತಿನಿಧಿಗಳಿಗೆ ಹೈಕಮಾಂಡ್ನಿಂದ ನೋಟೀಸ್ ಕೊಡಿಸಿದ್ದಾರೆ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.